ಮನಸ್ಸೆಂಬ ಗುಜರಿ ಅಂಗಡಿ

ಮೊನ್ನೆ ಯುಗಾದಿಗೆಂದು ಮನೆಯೆಲ್ಲಾ ಕ್ಲೀನ್ ಮಾಡುವಾಗ ಸಿಕ್ಕ ಹಳೆಯ ಗ್ರೀಟಿಂಗ್ ಕಾರ್ಡ್ ಮದುವೆಗೆ ಮೊದಲಿನ ದಿನಗಳನ್ನು ನೆನಪಿಸಿತ್ತು. ಪ್ರಶಾಂತನಿಗೆಂದೇ ನಾನೇ ಕೂತು ಕೈಯಾರೆ ಮಾಡಿದ್ದ, ಪ್ರೀತಿ ತೋರಿದ ದಿನಗಳು.

ಅಪರೂಪಕ್ಕೊಮ್ಮೆ ಎಲ್ಲೆಲ್ಲಿಂದಲೋ ಸಿಕ್ಕಿಬಿಡುವ ಈ ವಸ್ತುಗಳೇ ಹೀಗೆ. ವಾಸ್ತವದಿಂದ ಗತಕಾಲಕ್ಕೆ ಸಣ್ಣ ಪಯಣ ಮಾಡಿಸುತ್ತವೆ. ನೆನಪಿನ ನವಿಲುಗರಿ ಬಿಚ್ಚಿ ಮನಸ್ಸು ಸಂತೋಷದ ಮಳೆಗೆ ತೋಯ್ದು ತೊಪ್ಪೆಯಾಗುತ್ತದೆ, ದುಃಖಕ್ಕೆ ಕಣ್ಣಾಲಿಗಳನ್ನು ತುಂಬಿಸುತ್ತವೆ.

ಎಡಬಿಡದೆ ಪುಸ್ತಕ ಓದುವ ಹುಚ್ಚಿದ್ದ ನನಗೆ ಅಜ್ಜನಮನೆಗೆ ಹೋದಾಗಲೆಲ್ಲ ಅಟ್ಟದ ಮೇಲಿದ್ದ ಹಳೆಯ ಪುಸ್ತಕ ಸಂಗ್ರಹ ಒಂದು ಸಣ್ಣ ನಿಧಿಯಂತೇ ಕಾಣುತ್ತಿತ್ತು. ಯಂಡಮೂರಿ ವೀರೇಂದ್ರನಾಥರ ಅನುದೀಪ, ಪರಮಹಂಸ ಯೋಗಾನಂದರ ಪವಾಡ ಪ್ರಪಂಚ, ಕರ್ವಾಲೋದ ಮಂದಣ್ಣ ಎಲ್ಲರ ಪರಿಚಯ ಆಗಿದ್ದು ಈ ಕ್ಲೀನಿಂಗ್ ಕೆಲಸಗಳಿಂದಲೇ!

ಒಮ್ಮೆ ಹಾಗೆ ಅಟ್ಟದ ಮೇಲೆ ಏನೋ ಹುಡುಕಲು ಹೋಗಿ ಮಾವ ಸುಮಾರು 20 ವರ್ಷದ ಹಿಂದೆ ಅತ್ತೆಗೆ ಬರೆದ ಪ್ರೇಮ ಪತ್ರಗಳ ಗಂಟು ಸಿಕ್ಕಿ ಓದಲೋ ಬೇಡವೋ ಎಂಬ ಜಿಜ್ಞಾಸೆಯ ನಡುವೆ ಒಂದೇ ಓದಿದರಾಯಿತು ಎಂದು ಓದಿದ ಪೂರ್ತಿ ಕಟ್ಟು ಇನ್ನು ಎಲ್ಲೋ ನನ್ನ ನೆನಪಿನಲ್ಲಿ ಬೆಚ್ಚಗೆ ಕೂತಿದೆ.

'ನಿಮ್ ರೂಮ್ ನೋಡಕ್ಕಾಗಲ್ಲ ಏನೇನೋ ತುಂಬ್ಕೊಂಡಿದೆ. ಕ್ಲೀನ್ ಮಾಡಕ್ಕೂ ಟೈಮ್ ಆಗ್ತಿಲ್ಲ'  ಅಂತ ಅಮ್ಮ ನಾನು ಅಕ್ಕ ಇಬ್ಬರು ಮನೆ ಬಿಟ್ಟ ಮೇಲೆ  ತುಂಬಾ ಕಾಲ ಹೇಳುತ್ತಲೇ ಇದ್ದಳು.
ಕೊನೆಗೊಮ್ಮೆ ಮನೆಗೆ ಹೋದಾಗ 'ಬೇಕಾದ್ದು ಎತ್ತಿಟ್ಕೊ ಇಲ್ಲ ಅಂದ್ರೆ ಎಲ್ಲ ಕಸದಬುಟ್ಟಿಗೆ ಸೇರತ್ತೆ' ಅಂತ ಅಮ್ಮ ಧಮಕಿ ಹಾಕಿದ ಮೇಲೆ ತಡಕಾಡಿದಾಗ ಅಲ್ಲಿ ಸಿಕ್ಕಿದ- ಯಾವ್ಯಾವುದೋ ಸಮುದ್ರದ ಬೀಚ್ನಿಂದ ತಂದ ಕಪ್ಪೆ-ಚಿಪ್ಪುಗಳ ಸಂಗ್ರಹ, ಪುಸ್ತಕಗಳ ಮಧ್ಯೆ ಇಟ್ಟಿದ್ದ ಎಂದೋ ಒಣಗಿದ ತರಾವರಿ ಎಲೆಗಳು, ಮರಿಹಾಕುತ್ತದೆಂದು ಇಟ್ಟ ನವಿಲುಗರಿ ಹಾಡು ಗುನುಗಿಸುವಂತೆ ಮಾಡಿದರೆ, ಸಣ್ಣ ಪ್ಲಾಸ್ಟಿಕ್ ಕವರಿನ ತುಂಬಾ ಸಿಕ್ಕಲ್ಲಿ ಹೆಕ್ಕಿ ಜತನದಿಂದ ಕಾಪಿಟ್ಟ ಮುರಿದ- ಹೊಳೆಯುವ ವಿವಿಧ ಸಣ್ಣಪುಟ್ಟ ವಸ್ತುಗಳು ಬಾಲ್ಯವನ್ನು ನೆನಪಿಸಿದ್ದವು.
ಯಾಕೆ ಬೇಕು ಇವೆಲ್ಲ ಎಂದು ಬಿಸಾಕಲು ಹೊರಟಾಗಲೂ ಇಷ್ಟೆಲ್ಲಾ ಆಸೆಯಿಂದ ಇಷ್ಟು ವರ್ಷ ಸಂಗ್ರಹಿಸಿದ ವಸ್ತುಗಳು ಮುಂದೆಂದಾದರೂ ಬೇಕಾಗಬಹುದು ಎಂದು ಮತ್ತೆ ಎಲ್ಲ ಒಳ ಸೇರಿದ್ದವು!

ಇದು ಈ ನಮ್ಮ ಮಧ್ಯಮ ವರ್ಗದ ಟ್ರೇಡ್ ಮಾರ್ಕ್- ಒಂದೈನೂರು ಪ್ಲಾಸ್ಟಿಕ್ ಕವರ್ಗಳಿರುವ ಒಂದು ಕವರ್, ಯಾರೋ ಹಬ್ಬಕ್ಕೋ ಮದುವೆಗೋ ಕೊಟ್ಟ ಯಾವ ಸೀರೆಗೂ ಮ್ಯಾಚ್ ಆಗದ ನೂರಾರು ಬ್ಲೌಸ್ ಪೀಸ್ಗಳು, ಎಂದೂ ಖಾಲಿಯಾಗದ ಆ ಒಂದು ಕಾಡಿಗೆ ಡಬ್ಬಿ, ಒಂದು ಸಣ್ಣ ಬಿರುಕಿನಿಂದ ಮುಚ್ಚಳ ಮುಚ್ಚಲಾಗದ ಸ್ಟೀಲ್ ಡಬ್ಬಿ (ಬೇರೆಯದಿದ್ದರೂ ಆ ಡಬ್ಬಿಯನ್ನು ಬಿಡಲಾಗದ ಒಂಥರಾ ಪ್ರೀತಿ!), ಎಂದೋ ಮಸುಕಾಗಿ ಅದರ ಮೇಲೆ ಮಾಡಿದ ಕಸೂತಿ ಕಾಣದಿದ್ದರೂ ಅಜ್ಜಿಯೋ ಚಿಕ್ಕಮ್ಮನೋ ಮಾಡಿದ್ದೆಂಬ ಪ್ರೀತಿಗೆ ಇನ್ನು ಸೋಫಾದ ಮೇಲೆ ಮನೆ ಮಾಡಿದ ಮೇಲು ಹೊದಿಕೆ. ಇನ್ನು ಏನೇನೋ.

ನೋಡಿ ಮಾತು ಎಲ್ಲಿಂದ ಎಲ್ಲಿಗೋ ಹೋಯಿತು. ಈ ಹಳೆ ನೆನಪುಗಳೇ ಹೀಗೆ. ಒಂದಕ್ಕೊಂದು ತಳುಕು ಹಾಕಿಕೊಂಡು ಎಲ್ಲಿ ಏನು ಎಂದು ಗೊತ್ತಾಗದ ಕ್ಲಿಷ್ಟವಾದ ಜೇಡರಬಲೆಯಂತೆ. ಹೊರಗೆ ನೋಡುವವರಿಗೆ ಗೋಜಲು ಗೋಜಲಾಗಿ ಕಾಣಿಸಿದರೂ ಹೆಣೆದವರಿಗೆ ಅದರ ಒಂದೊಂದು ಮೂಲೆಯೂ ಚಿರಪರಿಚಿತ.

ಊರಲ್ಲಿ ಹೊಸ ಮನೆ ಕಟ್ಟಿಸಲೆಂದು ಹಳೆಯದನ್ನು ಒಡೆಯುವ ಮುಂಚೆ ಅಮ್ಮ ಫೋನ್ ಮಾಡಿದ್ದಳು. 30 ವರ್ಷಗಳ ಕಾಲ ತುಂಬಿಟ್ಟಿದ್ದ ಎಲ್ಲವನ್ನು ಖಾಲಿ ಮಾಡಬೇಕು. ಒಂದೆರಡು ದಿನದ ಕೆಲಸವಲ್ಲ. ಬಾ ಸಹಾಯಕ್ಕೆ ಅಂತ. ಹೋದಾಗ ಕಂಡಿದ್ದು ಒಂದು ದೊಡ್ಡ ಗುಜರಿಗಾಗುವಷ್ಟು ಸಾಮಾನು. ಅಟ್ಟ ಹತ್ತಿ, ಹಳೆಯ ಕಬ್ಬಿಣದ ಬೀರು ತೆಗೆದು, ಅಜ್ಜಿಯ ಟ್ರಂಕ್ ಎಲ್ಲ ತಲೆಕೆಳಗು ಮಾಡಿ ಮುಗಿಸುವಷ್ಟರಲ್ಲಿ 2 ದಿನ ಬೇಕಾಯ್ತು.
ರೇಷ್ಮೆ ಸೀರೆ, ಬೆಳ್ಳಿ ಪಾತ್ರೆ, ಕಂಚಿನ ಊಟದ ತಟ್ಟೆಗಳು ಖುಷಿಯಿಂದ ಹೊಸ ಮನೆಗೆ ಭಡ್ತಿ ಪಡೆದವು ಆದರೆ ಅಜ್ಜಿ ಮುಂದೆ ಯಾವಾಗಲೋ ಮೊಮ್ಮಕ್ಕಳ ಬಾಣಂತನಕ್ಕೆ ಬೇಕಾಗುತ್ತೆ ಅಂತಲೋ ಅಥವಾ ಮತ್ತೇನಕ್ಕೋ ಇಟ್ಟ ಮೆತ್ತಗಿನ ಬಿಳಿ ಕಾಟನ್ ಪಂಚೆಯ ಬಟ್ಟೆಗಳು, ಈಗಿರುವುದು ಸರಿಯಿದೆ ಹೊಸದ್ಯಾಕೆ ಎಂದು ತೆಗೆದಿಟ್ಟ ಗ್ಯಾಸ್ ಲೈಟರ್, ಅವಳಣ್ಣನಿಂದ ಉಡುಗೊರೆಯಾಗಿ ಬಂದ ಎಂದೂ ಉಪಯೋಗಿಸದಿದ್ದರೂ ಮುಕ್ಕಾದ ಅಲ್ಯೂಮಿನಿಯಂ ಲೋಟ, ಅವಳ ಮಾತ್ರೆಗಳಿಡಿತ್ತಿದ್ದ ಔಷಧಿ ಡಬ್ಬಿ, ಎಲ್ಲ ಮೊಮ್ಮಕ್ಕಳ 'ಅಯ್ಯೋ, ಹಾಸಿಗೆಲೇ ಇಸ್ಸಿ ಮಾಡಿಬಿಟ್ಯ?' ಎಂಬ ಮುಜುಗರದ ಒಂದೆರಡು ವರ್ಷಗಳನ್ನು ಸುಲಭ ಮಾಡುವ ಪ್ಲಾಸ್ಟಿಕ್ ಷೀಟ್, ಅಪ್ಪ ತಂದು ಕೊಟ್ಟಿದ್ದನೆಂಬ ಮಾತ್ರಕ್ಕೆ ಬೇರೊಬ್ಬರಿಗೆ ಮುಟ್ಟಲೂ ಬಿಡದೆ , ಎಲ್ಲಿ ಉಪಯೋಗಿಸಿದರೆ ಸವೆದು ಹೋಗುತ್ತದೋ ಎಂದು ಬೀರುವಿನಲ್ಲಿ ಇಟ್ಟಿಟ್ಟೆ ಲಡ್ಡಾದ ರೇಷ್ಮೆ ಶಾಲು, ಸುಧಾ-ತರಂಗಗಳಲ್ಲಿ ಬಂದ ಧಾರಾವಾಹಿಯೆಲ್ಲವನ್ನೂ ಒಂದೂ ಸಂಚಿಕೆ ಬಿಡದಂತೆ ಕತ್ತರಿಸಿ  ಹೊಲೆದಿಟ್ಟ ಧಾರಾವಾಹಿಗಳು, ಇನ್ನೂ ಏನೇನೋ.

ಮದುವೆಯಾಗಿ ಹೆಂಡತಿಯನ್ನು ಪ್ರೀತಿಸಿದರೂ ಎಂದೂ ಮರೆಯದ ಮೊದಲ ಹುಡುಗಿಯಂತೆ, ಹೊಸ ವಸ್ತುಗಳು ಬಂದರೂ ಈ ಹಳೆಯ ವಸ್ತುಗಳೆಲ್ಲ ನಮ್ಮ ನೆನಪಿನಂಗಳದಲ್ಲಿ ಒಂದು ಶಾಶ್ವತ ಸ್ಥಾನ ಗಿಟ್ಟಿಸಿಬಿಡುತ್ತವೆ. ಕಂಡದ್ದೆಲ್ಲ ಬೇಡುವ ನಮ್ಮ ಇಂದಿನ ಕೊಳ್ಳುಬಾಕ ಸಂಸ್ಕೃತಿ ಈ ಹಳೆಯ ವಸ್ತುಗಳನ್ನೆಲ್ಲ ನೋಡಿ ನಗುತ್ತಿದರೂ ಅದರೊಂದಿಗಿದ್ದ ಸವಿನೆನಪುಗಳು ಮನಸ್ಸನ್ನು ಹಿಡಿದಿಡುವುದಂತೂ ಸತ್ಯ. 

Comments

Post a Comment

Popular posts from this blog

ಫೋನ್ ಪುರಾಣ

ಸಾಕಮ್ಮ

ಅಜ್ಜಿಯ ನೆನಪು!