ಫೋನ್ ಪುರಾಣ

 ಈ ಮೊಬೈಲ್ ಫೋನ್ ಅನ್ನೋದು ನಮ್ಮ ಜೀವನದ ಅವಿಭಾಜ್ಯ ಅಂಗ. ಏನಿಲ್ಲದಿದ್ರೂ ನಡೆಯುತ್ತೆ ಆದ್ರೆ ಮೊಬೈಲ್ ಇಲ್ದೆ ಆಗೊಲ್ಲ ಅನ್ನೋದು ಪರಮ ಸತ್ಯ. ಹುಟ್ಟಿದ 6 ತಿಂಗಳಿಗೆ ಶುರುವಾಗುವ ಮಕ್ಕಳ ಮೊಬೈಲ್ ಪ್ರೇಮ ಈಗ 65 ದಾಟಿದ ಹಿರಿಯರನ್ನೂ ಬಿಟ್ಟಿಲ್ಲ. ಎಷ್ಟರ ಮಟ್ಟಿಗೆ ಅಂದ್ರೆ  ಮೆಸ್ಸೇಜ್ ಕಳಿಸಲು ಬೆರಳಲ್ಲಿ ಕುಟ್ಟಿ ಕುಟ್ಟಿ ಇನ್ನೊಂದು ಸಾವಿರ ವರ್ಷದಲ್ಲಿ ನಮ್ಮ ಹೆಬ್ಬೆರಳು ಮಾತ್ರ ದೊಡ್ಡದಾಗಬಹುದು ಅಂತ ವಿಜ್ಞಾನಿಗಳ ಅಭಿಪ್ರಾಯ. 

ನಾವು ಸಣ್ಣವರಿರುವಾಗ ಅಪ್ಪ ಮನೆಯಿಂದ ಹೊರ ಹೋಗುವ ಮೊದಲು ಗಾಡಿ ಕೀ, ಪರ್ಸು, ಕರ್ಚಿಫ್ ಹೀಗೆ ಎಲ್ಲಾ ತಗೊಂಡ್ರ ಅಂತ ಅವರನ್ನ ನೆನಪಿಸಬೇಕಿತ್ತು. ಈಗೆಲ್ಲ ಬೇರೇನೇ ಬಿಟ್ರು ಮೊಬೈಲ್ ಬಿಟ್ಟು ಮನೆಯಿಂದ ಹೊರಹೋಗೋಹಾಗೆ ಇಲ್ಲ ಬಿಡಿ. ವಸುಧೇಂದ್ರ ಅವರು ಮೊಬೈಲ್ ಮರೆತು ಮೈಸೂರಿಗೆ ಬಂದಾಗ ಆದ ಪಜೀತಿ ಬಗ್ಗೆ ಒಂದು ಲೇಖನದಲ್ಲಿ ಬರೆದಿದ್ದಾರೆ. ಅವತ್ತು ಫೋನ್ ಬುಕ್ಕಿನಲ್ಲಿ ನಂಬರ್ ಹುಡುಕಿ ತೆಗೆದು ಅಡ್ರೆಸ್ ಪತ್ತೆಹಚ್ಚಿದ ಅವರು ಇವತ್ತೇನಾದರೂ ಫೋನ್ ಬಿಟ್ಟು ಬಂದ್ರೆ ಹುಡುಕಲು ಯಾವ ಬುಕ್ಕು ಬೇಕಿಲ್ಲದೆ ಗೂಗಲ್ ಎಂಬ ಮಾಯಾಜಾಲದಲ್ಲಿ ಕ್ಷಣದಲ್ಲಿ ಪತ್ತೆಹಚ್ಚಬಹುದಾದರೂ ಅದಕ್ಕೂ ನಿಮ್ಮ ಫೋನ್ ಕೊಡಿ ಅಂತ ಯಾರನ್ನಾದರೂ ಕೇಳಬೇಕಲ್ಲ ಅನ್ನೋದೆ ಸಮಸ್ಯೆ. 

ತುಂಬಾ ಹಿಂದೆ ಅಲ್ಲ ಈಗ ಸುಮಾರು 25 ವರ್ಷಗಳ ಹಿಂದೆ ಮನೆಯಲ್ಲಿ ಕೇವಲ landline ಮಾತ್ರ ಇರುತ್ತಿದ್ದ ಕಾಲ. ಅಪ್ಪ ಶಿವಮೊಗ್ಗದಿಂದ 20ಕಿಮೀ ದೂರದ ಹೊಳಲೂರಿನಲ್ಲಿ ಕೆಲಸ ಮಾಡ್ತಿದ್ರು. ತುಂಬಾ ಬ್ಯುಸಿ ಇದ್ದ ಬ್ರಾಂಚ್. ಅಪ್ಪ ಆಫೀಸ್ನಿಂದ ಮನೆಗೆ ಬರೋ ಅಷ್ಟರಲ್ಲಿ ಮನೆಗೆ 10-15 ಫೋನ್ ಕಾಲ್ಗಳಾದರೂ ಬಂದಿರ್ತಿತ್ತು. ಫೋನ್ ಮಾಡಿದ ಎಲ್ಲರ ಹೆಸರು, ವಿಷಯ ಕಾಗದದಲ್ಲಿ ನೀಟಾಗಿ ಬರೆದಿಡಬೇಕಿತ್ತು. ಅಪ್ಪ ಒಂದ್ಸಲ ಯಾರದೋ ಹೆಸರಿನ ಜೊತೆ ಅವರು ಕೊಟ್ಟ ಫೋನ್ ನಂಬರ್ ಸರಿಯಾಗಿ ಬರೆದಿಲ್ಲ, ಒಂದು ಮುಖ್ಯವಾದ ವಿಷಯಕ್ಕೆ ಅವರಿಗೆ ಫೋನ್ ಮಾಡಬೇಕಿತ್ತು ಅಂತ ಪೇಚಾಡಿದ್ರು. ಕೈಬರಹ ಚೆನ್ನಾಗಿ ರೂಢಿಸಿಕೊ, ಬರೆದರೆ ಪ್ರಿಂಟ್ ಮಾಡಿದ ಹಾಗೆ ಕಾಣಬೇಕು ನೋಡು ಅಂತಿದ್ದ್ರು.  

ನಾನು ಹೈಸ್ಕೂಲ್ ಗೆ ಬರುವಷ್ಟರಲ್ಲಿ ಬಸ್ಸಲ್ಲಿ, ಹೊರಗಡೆ ಯಾರ್ಯಾರೋ ಹುಡುಗರು ಪ್ರೀತಿ ನಿವೇದಿಸಿಕೊಳ್ಳೋದು, ಪತ್ರ ಬರೆಯೋದು ಎಲ್ಲ ಶುರು ಆಯ್ತು. ಎಲ್ಲಿಂದಲೋ ಫೋನ್ ನಂಬರ್ ತಗೊಂಡು ಮನೆಗೆ ಫೋನ್ ಮಾಡ್ತಿದ್ರು. ನನ್ನ ಧ್ವನಿ ಕೇಳಿದ್ರೆ ಮಾತು ಇಲ್ಲದಿದ್ದರೆ ಕಾಲ್ ಕಟ್. ಅಮ್ಮನಿಗಂತೂ ಯಾವಾಗಲೂ ಅನುಮಾನ. ನನಗಂತು ತಲೆ ಚಿಟ್ಟು ಹಿಡಿಯೋದೊಂದೇ ಬಾಕಿ. ಈ ಪದೇ ಪದೇ ಫೋನ್ ಕಾಲ್ಗಳು, ಮಾತಾಡದೆ ಕಟ್ ಮಾಡುವವರ ಕಿರಿಕಿರಿ ಸಹಿಸಲಾಗದೆ ಅಪ್ಪ ಕೊನೆಗೆ ಕಾಲರ್ ಐಡಿ ಇರೋ ಫೋನ್ ತಂದ್ರು ಮನೆಗೆ. ಅದರಿಂದ ಸಮಸ್ಯೆ ಏನು ನಿಲ್ಲಲಿಲ್ಲ ಬಿಡಿ. ಯಾಕೆ ಅಂತಿರಾ? ಆಗಿನ್ನೂ ರಸ್ತೆ ರಸ್ತೆಯಲ್ಲಿ ಪಬ್ಲಿಕ್ ಪೇ ಫೋನ್ ಗಳಿದ್ದ ಕಾಲ. ಯಾವುದೋ ಪೇ ಫೋನ್ ನಿಂದ ಕಾಲ್. ನಂಬರ್ ನೋಡ್ಕೊಂಡು ನಾವು ಮತ್ತೆ ಫೋನ್ ಮಾಡಿದ್ರೂ ಆ ಕಡೆ ಫೋನ್ ಎತ್ತಿದವರು ಯಾರ್ ಫೋನ್ ಮಾಡಿದ್ರೋ ಗೊತ್ತಿಲ್ಲ ಅಂತಿಂದ್ರು. ಅಂತೂ ಅಮ್ಮನಿಗೆ ಯಾಕಾದ್ರೂ ಹೆಣ್ಣು ಹುಟ್ಟಿದ್ದಾಳೋ ಅನ್ನಿಸಿರಲಿಕ್ಕೆ ಸಾಕು!

ನಮ್ಮ ಮನೆ ಎದುರುಗಡೆ ಸಹ ಒಂದು ಹಳದಿ ಬಣ್ಣದ ಪೇ ಫೋನ್ ಇತ್ತು. ಒಂದು ರೂಪಾಯಿ ನಾಣ್ಯ ಹಾಕಿದ್ರೆ ಒಂದು ನಿಮಿಷ ಯಾರ ಜೊತೆಯಾದ್ರೂ ಮಾತನಾಡಬಹುದಿತ್ತು. ಕಾಯಿನ್ ಬೂತ್ ಹತ್ರ ಬರೀ ಹುಡುಗರೇ ಇರ್ತಿದ್ರು ಅಂತ ನೀವು ಅಂದುಕೊಂಡ್ರೆ ಅದು ತಪ್ಪು. ಮನೆಯಿಂದ ಸ್ವಲ್ಪ ದೂರದಲ್ಲಿರೋ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಹುಡುಗಿಯರ ಸಾಲು ಫೋನ್ ಮಾಡಲು. ಒಬ್ಬೊಬ್ಬರು 10-15 ನಿಮಿಷ ಮಾತಾಡ್ತಿದ್ರು. ಪೇ ಫೋನ್ ಹಾಕಿಸಿದ್ದ ಎದುರು ಮನೆ ಅಂಕಲ್ 'ಏನಮ್ಮ ಬಾಯ್ ಫ್ರೆಂಡ್ ಇಲ್ದೆ ಇರೋ ಹುಡ್ಗಿರೇ ಇಲ್ವಲ್ಲಮ್ಮ' ಅಂತ ತಮಾಷೆ ಮಾಡ್ತಿದ್ರು. 

ಪರೀಕ್ಷೆ ಸಮಯ ಬಂದ್ರೆ ಬರೀ ಫೋನ್ ನಲ್ಲಿ ಹರಟೆ ಕೊಚ್ಕೊಂಡು, ಆ ಡೌಟು ಈ ಡೌಟು ಅಂತ ಗೆಳತಿಯರ ಹತ್ರ ಗಂಟೆಗಟ್ಲೆ ಮಾತಾಡ್ತಿಯಾ ಅಂತ ಅಮ್ಮ ಬೈದಾಗ ಯಾರ ಫೋನೂ ಬೇಡ ಅಂತ ಫೋನ್ ಪಿನ್ ತೆಗೆದಿಟ್ಟುದ್ದು ಈಗಿನ ಮಕ್ಕಳಿಗೆ ಹೇಳಿದ್ರೆ ಸೈಲೆಂಟ್ ಮೋಡ್ ಅಲ್ಲಿ ಹಾಕಕ್ಕೆ ಬರ್ತಿರ್ಲಿಲ್ವಾ ಅಂತ ಅಕ್ಕನ ಮಗ ಅಚ್ಚರಿಯಲ್ಲಿ ಕೇಳಿದ್ದ. 

ಆಮೇಲೆ ಮೊಬೈಲ್ ಫೋನ್ ಬಂದಿದ್ದೇ ಬಂದಿದ್ದು ನೋಡಿ, ಕಾಲ ಹೇಗೆ ಬದಲಾಗಿ ಹೋಯ್ತು ಅಂತಿರಾ. ಒಂದ್ಸಲ ಹುಡುಗನೊಬ್ಬ ತನ್ನ ಹತ್ರ ಫೋನ್ ಇದೆ ಅಂತ ತೋರಿಸಿಕೊಳ್ಳೋಕ್ಕೆ ಸುಮ್ನೆ ಕಿವಿಗೆ ಹಚ್ಚಿ ಮಾತಾಡ್ತಿರುವಾಗ ದೊಡ್ಡದಾಗಿ ಫೋನ್ ರಿಂಗ್ ಆಗಿ ಅವ ಬೆಪ್ಪಾಗಿದ್ದು ನಾವು ಕಿಸಕ್ ಎಂದು ನಗೆಯಾಡಿದ್ದು, ಕ್ಯಾಮೆರಾ ಫೋನ್ ಇದೆ ಅಂದ್ರೆ ತುಂಬ ದುಡ್ಡಿರೋವ್ರೆ ಅಂತ ಅಂದ್ಕೊಂಡಿದ್ದು, ಹುಟ್ಟಿದಹಬ್ಬಕ್ಕೆ ಫ್ರೆಂಡ್ ಒಬ್ಬಳಿಗೆ ಅವರ ಮನೆಯಲ್ಲಿ ಫೋನ್ ಕೊಡಿಸಿದಾಗ ಅವಳು ತೋರಿಸೋಕ್ಕೆ ಅಂತ ಸ್ಕೂಲ್ಗೆ ತಂದು ಟೀಚರ್ ಅದನ್ನು ಕಿತ್ತು ಇಟ್ಕೊಂಡಿದ್ದು ಆಮೇಲೆ ಅವಳು ಅತ್ತು ಕರೆದು ಇನ್ನೊಂದು ಸಲ ಸ್ಕೂಲ್ಗೆ ಫೋನ್ ತರಲ್ಲ ಅಂತ ಬರೆದು ಕೊಟ್ಟ ಮೇಲೆ ಫೋನ್ ವಾಪಸ್ ಸಿಕ್ಕಿದ್ದು ಎಲ್ಲ ಈಗ ಬರೀ ನೆನಪುಗಳು. 

ಮೊನ್ನೆ ಊರಿಗೆ ಹೋಗಿದ್ದಾಗ ಏನೋ ಹುಡುಕ್ತಾ ಅಪ್ಪನ ಹಳೆಯ ಫೋನ್ ಬುಕ್ ಸಿಗ್ತು. ಎಲ್ಲರ ಫೋನ್ ನಂಬರ್ ಜೊತೆ ಅವರ ಅಡ್ರೆಸ್, ತೀರಾ ಹತ್ತಿರದ ಸಂಬಂಧವಾದ್ರೆ ಅವರ ಗೋತ್ರ, ಹುಟ್ಟಿದ ದಿನ ಎಲ್ಲ ಬರೆದಿಟ್ಟಿದ್ದನ್ನು ನೋಡಿದ್ದೇ ಅಪ್ಪ ಎಷ್ಟು ಓರಣವಾಗಿದ್ರು ಅನ್ನಿಸ್ತು. ಹವ್ಯಕ ಫೋನ್ ಡೈರೆಕ್ಟರಿ ಮಾಡುತ್ತಿದ್ದಾಗ ಪ್ರತೀ ವಾರ ಎಲ್ಲರ ಮನೆಗೂ ಹೋಗಿ ಅವರ ನಂಬರ್ ಜೊತೆ ಮನೆಯವರ ವಿಷಯನ್ನೂ ತಿಂಗಳುಗಟ್ಟಲೆ ಕಷ್ಟಪಟ್ಟು ಕಲೆಹಾಕಿ ಕೊನೆಗದು ಪ್ರಿಂಟ್ ಆಗಿ ಹೊರಬಂದು ಎಲ್ಲರ ಪ್ರಶಂಸೆಗೆ ಪಾತ್ರವಾದಾಗ ಅಪ್ಪನಿಗೆ ಮಾಡಿದ ಸನ್ಮಾನ ಎಲ್ಲ ಕಣ್ಣಿಗೆ ಕಟ್ಟಿದಂತಿದೆ. 

ಎಲ್ಲ ನಂಬರ್ ಮೊಬೈಲ್ನಲ್ಲೇ ಇದ್ರೂ ನಮ್ಮತ್ತೆ ಇನ್ನೂ ಫೋನ್ ಬುಕ್ ಇಟ್ಕೊಂಡಿದ್ದಾರೆ. ಯಾರ ನಂಬರ್ ಬೇಕಿದ್ರೂ ಇನ್ನು ಬುಕ್ ತೆಗೆದು ನಂಬರ್ ನೋಡಿ ಡಯಲ್ ಮಾಡ್ತಾರೆ. 'ಆಯಿ ನಾ ನಿಂಗೆ ಹೇಳಿ ಕೊಡ್ತ್ನೆ ಹೆಂಗೆ ಮಾಡದು ಮೊಬೈಲ್ನಲ್ಲಿ' ಅಂತ ಹೇಳಿದರೂ ಅವರು 'ನಂಗೆ ಪುಸ್ತಕದಲ್ಲಿದ್ರೆ ಸರಿ. ಮೊಬೈಲ್ ನಲ್ಲಿ ಅಳಿಸಿ ಹೋದ್ರೆ ಕೊನಿಗೆ  ಅವರ ಸಂಪರ್ಕಾನೆ ತಪ್ಪಿ ಹೋಗ್ತಲೇ ' ಅಂದಾಗ ನನ್ನ ಬಳಿ ಯಾವ ಉತ್ತರವೂ ಇರಲಿಲ್ಲ. 

ನಾವು ಹೊಸದಾಗಿ ಮನೆ ಕಟ್ಟಿ ಫೋನ್ ಕನೆಕ್ಷನ್ ತಗೊಂಡಾಗ ಅಪ್ಪ BSNL ಆಫೀಸ್ ನಲ್ಲಿ ಯಾರನ್ನೋ ಹಿಡಿದು ನೆನಪಿಡಲು ಸುಲಭವಾದ ನಂಬರ್ ಕೊಂಡಿದ್ದರು. ಸ್ವಲ್ಪ ವರ್ಷಗಳ ನಂತರ 5 ಅಂಕೆಗಳಿದ್ದ ಶಿವಮೊಗ್ಗದ ನಂಬರ್ಗಳೆಲ್ಲ 6 ಅಂಕೆಗಳಾಗಿ ಬದಲಾಗಿ 50678 ಅಂತ ಇದ್ದ ನಮ್ಮನೆ ನಂಬರ್ 250678 ಅಂತಾಗಿದ್ದು, ಅಯ್ಯೋ ನಂಬರ್ ಅಲ್ಲಿ ಸೀರೀಸ್ ಇಲ್ವಲ್ಲಾ ಅಂತ ಬೇಜಾರಾಗಿತ್ತು. ಬದಲಾದ ಒಂದಿಡಿ ವರ್ಷ ಎಲ್ಲರಿಗೂ ನಂಬರ್ ಡಯಲ್ ಮಾಡುವಾಗ ಹಿಂದಿನ 2-3 ಬಿಟ್ಟು ಹೋಗಿ ನಂಬರ್ ತಪ್ಪಾಗಿ ಮತ್ತೆ ಡಯಲ್ ಮಾಡಬೇಕಾದಾಗ ಥೋ ಅನ್ಸಿದ್ದು ಸುಳ್ಳಲ್ಲ. 

25 ವರ್ಷ ಇದ್ದ ಫೋನ್ ನಂಬರ್ ಕೊನೆಗೊಂಡು ದಿನ 'ಈ ಫೈಬರ್ನೆಟ್ ಹಾಕಿದ್ರೆ ಬೇರೆ ನಂಬರ್ ಕೊಡ್ತೀವಿ, ಹಳೆ ನಂಬರ್ಗೆ ಬರಲ್ಲ' ಅಂತ ಯಾವುದೋ ನಂಬರ್ಗೆ ಬದಲಾಗುವಷ್ಟೊತ್ತಿಗೆ ಮನೆಗೆ ತಿಂಗಳಿಗೊಂದು ಕಾಲೂ ಸಹ ಬರ್ತಿರಲಿಲ್ಲ ಅನ್ನೋದೆ ವಿಪರ್ಯಾಸ. ಈಗ ನಮ್ಮನೆ ಫೋನ್ ನಂಬರ್ ಏನು ಅಂತ ಕೇಳ್ತೀರಾ? ಬಾಯಿಗೆ ಬರೊಲ್ಲ. ಮೊಬೈಲ್ ನಲ್ಲಿ ಸೇವ್ ಆಗಿದೆ. ಇರಿ ನೋಡ್ಕೊಂಡು ಹೇಳ್ತಿನಿ!

ಮೊಬೈಲ್ ಫೋನ್ ನಿಂದ ಆದ ದೊಡ್ಡ ಬದಲಾವಣೆ ಅಂದ್ರೆ ಯಾರಿಗೂ ಯಾರ ಫೋನ್ ನಂಬರ್ ನೆನಪಿರಲ್ಲ ಈಗ. ತಮ್ಮ ಸ್ವಂತ ನಂಬರ್ ಸಹ ನೋಡ್ಕೊಂಡು ಹೇಳೋರನ್ನು ನೋಡಿದ್ದೀನಿ ನಾನು. ಎಲ್ಲ ನಂಬರ್ ಫೋನ್ ನಲ್ಲೇ ಭದ್ರವಾಗಿರುವಾಗ ಕಷ್ಟಪಟ್ಟು 10 ಅಂಕೆಗಳನ್ನು ಯಾರು ನೆನಪಿಟ್ಕೋತಾರೆ ಹೇಳಿ. ನೆನಪಿಟ್ಕೊಂಡ್ರು ಎಷ್ಟು ನಂಬರ್ ನೆನಪಿಟ್ಕೋತಾರೆ ಅನ್ನೊದು ಇನ್ನೊಂದು ಪ್ರಶ್ನೆ. ಹೆಚ್ಚು ಅಂದ್ರೆ ಮನೆಯವರ 2-3 ಜನರ ನಂಬರ್ ನೆನಪಿರತ್ಯೆ ಹೊರತು ಅದಕ್ಕಿಂತ ಜಾಸ್ತಿ ನೆನಪಿನ ಶಕ್ತಿ ಈಗ ಯಾರಿಗೂ ಇಲ್ಲ. ನಾವು ಸಣ್ಣವರಿದ್ದಾಗ ಎಲ್ಲ ಸಂಬಂಧಿಕರ, ಗೆಳತಿಯರ ಫೋನ್ ಸಂಖ್ಯೆಗಳು ನಾಲಿಗೆ ತುದಿಯಲ್ಲೇ. ಈಗ ನೆನಸಿಕೊಂಡ್ರೆ ನನಗೆ ಅಚ್ಚರಿಯಾಗುತ್ತೆ. ಈಗಂತು ಯಾರದ್ದಾದ್ರೂ ನಂಬರ್ ಕೇಳಿದರೆ 'ನಿಮ್ಮ ನಂಬರ್ ಹೇಳಿ ಮಿಸ್ಡ್ ಕಾಲ್ ಕೊಡ್ತೀನಿ' ಅನ್ನೋರು ಜಾಸ್ತಿ. 

ಈಗೊಂದು ವರ್ಷದ ಹಿಂದೆ ನಾನು ಮನೆಯಲ್ಲಿಲ್ಲದಾಗ ಬೆಳಿಗ್ಗೆ ಪತಿರಾಯರು ಶಾರ್ಟ್ಸ್-ಟೀಶರ್ಟ್ ನಲ್ಲಿ ಚಪ್ಪಲಿ ಸ್ಟಾಂಡ್ ಸ್ವಚ್ಛ ಮಾಡಲು ಹೊರಬಂದಾಗ ಮನೆ ಬಾಗಿಲು ಗಾಳಿಗೆ ಧೋಪ್ ಅಂತ ಮುಚ್ಚಿಕೊಳ್ತಂತೆ. ಫೋನ್ ಮಾಡಲು ಬಳಿ ಮೊಬೈಲ್ ಇಲ್ಲ. ಇನ್ನೊಂದು ಕಿಲಿಕೈ ಕೂಡ ಇಲ್ಲ. ಪಕ್ಕದ ಮನೆಯೂ ಬೀಗ. ಸರಿ ಸೆಕ್ಯೂರಿಟಿ ಹತ್ರ ಫೋನ್ ಇಸ್ಕೊಂಡು ನಂಗೆ ಫೋನ್ ಮಾಡೋಣ ಅಂದ್ರೆ ನನ್ನ ಫೋನ್ ನಂಬರ್ ಅವರಿಗೆ ನೆನಪಿಲ್ಲ. ಕೊನೆಗೆ ಸೆಕ್ಯೂರಿಟಿ ಹೇಗೋ ಬಾಲ್ಕನಿಯ ಕಿಟಕಿಯಿಂದ ಒಳಹತ್ತಿ ಬಂದು ಬಾಗಿಲು ತೆಗೆಯುವಷ್ಟರಲ್ಲಿ ಬೆಳಿಗ್ಗೆ 10 ಘಂಟೆ. ಹಾಗೆ ಅವಸರದಲ್ಲಿ ತಯಾರಾಗಿ ಆಫೀಸಿಗೆ ಹೋಗುವಷ್ಟರಲ್ಲಿ ಏನಾಯ್ತು ಅಂತ ನಾನು ಮನೆಗೆ ಬರೋದಕ್ಕೂ ಸರಿ ಆಯ್ತು. ನನ್ನ ಮೊಬೈಲ್ ನಂಬರ್ ಸಹ ಬಾಯಿಗೆ ಬರಲ್ಲ ಅಂದ್ರೆ ಹಿಂಗೆ ಆಗ್ಬೇಕು ನಿಂಗೆ ಅಂತ ಅವರು ಬೈಸಿಕೊಂಡಿದ್ದು ಆಯ್ತು ಬಿಡಿ. ಬೇರೆಯವರದ್ದು ಅಲ್ಲದೇ ಇದ್ರೂ ನಿಮ್ಮ ಹೆಂಡತಿಯ ಫೋನ್ ನಂಬರ್ ಆದ್ರೂ ನೆನಪಿನಲ್ಲಿ ಇಟ್ಕೊಳಿಪ್ಪ ನೀವೆಲ್ಲಾ. 





Comments

  1. ಇಷ್ಟ ಆಯ್ತು. ಸಲೀಸಾಗಿ ಓದಿಸಿಕೊಂಡು ಹೋಯ್ತು.

    ReplyDelete

Post a Comment

Popular posts from this blog

ಸಾಕಮ್ಮ

ಅಜ್ಜಿಯ ನೆನಪು!