ಸಾಕಮ್ಮ
"ಯಾಕೊ ನನ್ನ ಹಣೆಬರಾನೇ ಸರಿ ಇಲ್ಲ" ಅಂದ್ಕೊಂಡು ಒಂದು ಲೋಟ ತಣ್ಣನೆ ನೀರು ಕುಡಿದು ಸೋಫ಼ಾಗೊರಗಿದಳು ಸಾಕಮ್ಮ ಅಲಿಯಾಸ್ ಸಾನ್ವಿ.
ಒಂದು ಹಳೇ ಕಾಲದ ಹೆಸರು ಇನ್ನೊಂದು ಫ಼ುಲ್ ಮಾಡರ್ನ್ ಹೆಸರು, ಯಾವುದೋ ಕೂರ್ಗಿ ಕಥೆ ಅಂತ ನೀವಂದುಕೊಂಡ್ರೆ ಅದು ತಪ್ಪು. ನಮ್ಮ ಕಥಾನಾಯಕಿ ಸಾಕಮ್ಮ ದಾವಣಗೆರೆಯವಳು. ಮೂರು ಜನ ಅಕ್ಕಂದಿರ ಹಿಂದೆ ಕೊನೆಗೆ ನಾಲ್ಕನೆಯದೂ ಹೆಣ್ಣೇ ಆದಾಗ ಅವರ ಅಮ್ಮ ಇನ್ನು ಹೆಣ್ಣು ಸಾಕು ಅಂತ ದೇವ್ರಿಗೆ ಹರಕೆ ಹೊತ್ಕೊಂಡು, ಇವ್ಳಿಗೆ ಸಾಕಮ್ಮ ಅಂತ ಹೆಸರಿಟ್ಟರಂತೆ. ಎಲ್ಲಾರ ತರ ಇವ್ಳಿಗೂ ಒಂದು ಹೆಸರು. What's in a name? ಅಂತ ಶೇಕ್ಸ್ ಪಿಯರ್ ಹೇಳಿದನೋ ಬಿಟ್ಟನೋ ಆದ್ರೆ ಬೆಳಿತಾ ಬೆಳಿತಾ ಸಾಕಮ್ಮನಿಗೆ ತನ್ನ ಇಡೀ ಬದುಕೇ ತನ್ನ ಹೆಸರಲ್ಲಿದೆ, ಇದಿರೋ ತನಕ ತನ್ನ ಜೀವನ ಸುಧಾರಿಸೊಲ್ಲ ಅನ್ಸೊಕ್ಕೆ ಶುರು ಆಯ್ತು.
ಅಕ್ಕಿ ಮಂಡಿಲೀ ಗುಮಾಸ್ತನಾಗಿದ್ದ ಅಪ್ಪನಿಗೆ ಬರ್ತಿದ್ದ ಸಂಬಳ ಮನೇಲಿದ್ದ ಜನರ ಹೊಟ್ಟೆ-ಬಟ್ಟೆಗೂ ಸಾಲ್ತಿರಲಿಲ್ಲ. ಅವರ ಅಮ್ಮ ಹೋಳಿಗೆ-ಹಪ್ಪಳ ಏನೇನೋ ಮಾಡಿ ಸ್ವಲ್ಪ ದುಡ್ಡು ಸಂಪಾದಿಸಿದರೂ ನಾಲ್ಕು ಜನ ಹೆಣ್ಣುಮಕ್ಕಳನ್ನ ನೋಡ್ಕೊಳ್ಳೊಕ್ಕಾಗದೆ ಸಾಕಮ್ಮ ಶಿವಮೊಗ್ಗೆಯಲ್ಲಿದ್ದ ತನ್ನ ದೊಡ್ಡಮ್ಮನ ಮನೆಗೆ ರವಾನೆಯಾದ್ಲು. ದೊಡ್ಡಮ್ಮನ ಮನೇಲೇನು ರಾಜವೈಭೋಗ ಇಲ್ಲದೇ ಇದ್ರೂ, ಸಣ್ಣಾ ಕಿರಾಣಿ ಅಂಗಡಿ ಇಟ್ಟಿದ್ದ ದೊಡ್ಡಪ್ಪನ ವ್ಯಾಪಾರ ತಕ್ಕಮಟ್ಟಿಗೆ ನಡೀತಿತ್ತು. ಒಬ್ಬನೇ ಗಂಡು ಮಗ ಇದ್ದ ದೊಡ್ಡಮ್ಮ ಸಾಕಮ್ಮನನ್ನು ಚೆನ್ನಾಗಿಯೇ ನೋಡಿಕೊಂಡ್ರು. ಬೆಳಿಗ್ಗೆ ಮನೆಕೆಲಸದಲ್ಲಿ ಸಹಾಯ ಮಾಡಿ ಶಾಲೆಗೆ ಹೋಗೊಕ್ಕೆ ಶುರು ಮಾಡಿದ್ಲು ಸಾಕಮ್ಮ.
ದಾವಣಗೆರೆಲಿ ಸಣ್ಣ ಸರ್ಕಾರಿ ಶಾಲೆಗೆ ಹೋಗ್ತಿದ್ದವಳು ಇಲ್ಲಿ ಸ್ವಲ್ಪ ದೊಡ್ಡಾ ಪ್ರೈವೇಟ್ ಸ್ಕೂಲಿಗೆ ಹೋಗಲು ಶುರುಮಾಡಿದ ಮೇಲೆ ಸಮಸ್ಯೆ ಶುರು ಆಯ್ತು. ದಾವಣಗೆರೆಲೇನೋ ಸಾಕಮ್ಮನ ಹೆಸರಿಗೆ ಯಾರೂ ಕಣ್ಣರಳಿಸಿ ನೋಡದಿದ್ದವರು ಇಲ್ಲಿದ್ದ ಕೃತಿಕ, ರಾಹುಲ್, ಕೀರ್ತನ, ರಷ್ಮಿಯರ ನಡುವೆ ಸಾಕಮ್ಮ ಎದ್ದುತೋರತೊಡಗಿದಳು. ಬೆಂಗಳೂರಿಂದ ಬಂದಿದ್ದ ಹೊಸ ಕ್ರಿಶ್ಚಿಯನ್ ಇಂಗ್ಲಿಷ್ ಟೀಚರ್ ದಿನಾ ಅಟೆಂಡೆನ್ಸ್ ತೆಗೆಯೋವಾಗ ಮಾತ್ರ ಸಾಕಮ್ಮನಿಗೆ ನಂಗ್ಯಾಕೆ ಇಂಥ ಹೆಸರಿದೆಯೋ ಅನ್ನಿಸದೇ ಇರುತ್ತಿರಲಿಲ್ಲ. ಅವರು ಏನೋ ಫ಼ಾರಿನ್ನಿಂದ ಬಂದವರ ತರ, ಹೇಳಲಾಗದೆ ಕಷ್ಟಪಟ್ಟುಕೊಂಡು ಸಕಾಮ್ಮ ಎಂದೇನೋ ಕೂಗುವುದೂ, ಲಾಸ್ಟ್ ಬೆಂಚಿನ ಹುಡುಗರು ಅಣಗಿಸುವುದು, ಹುಡುಗಿಯರು ಮುಸಿ-ಮುಸಿ ನಗುವುದೂ ನಿತ್ಯದ ಕಥೆಯಾಯ್ತು. ಯೆಸ್ ಟೀಚರ್ ಎಂದು ಹೇಳಲೂ ಆಗದೇ ಇದ್ದಲ್ಲೇ ಭೂಮಿ ತನ್ನ ನುಂಗಬಾರದೇ ಎಂದು ಹಿಡಿಯಾಗುತ್ತಿದ್ದಳು ಸಾಕಮ್ಮ.
ಯಾವುದೇ ಪಠ್ಯೇತರ ಚಟುವಟಿಕೆಗೆ ಹೆಸರು ಕೇಳಿದಾಗಲೂ ಸಾಕಮ್ಮ ಜೋರಾಗಿ ತನ್ನ ಹೆಸರು ಹೇಳಲೇ ನಾಚಿಕೆಯಾಗಿ ಸುಮ್ಮನೆ ಕೂರುತ್ತಿದ್ದಳು. ಹೈಸ್ಕೂಲ್ನಲ್ಲಿ ಒಮ್ಮೆ ಯಾವುದೋ ಸ್ಪರ್ಧೆಗೆ ಹೆಸರು ಕಳಿಸುತ್ತಿದ್ದಾಗ, ಕನ್ನಡ ಟೀಚರ್ "ಸಾಕಮ್ಮ ನೀನು ಡಿಬೇಟ್ ನಲ್ಲಿ ಭಾಗವಹಿಸು" ಅಂದಿದ್ದಕ್ಕೆ ಹಿಂದಿನ ಬೆಂಚಿಂದ ವೈಭವ್ "ಅವ್ಳೆನ್ ಡಿಬೇಟ್ ಮಾಡ್ತಾಳೆ ಮೇಡಮ್, ಅವ್ಳ ಹೆಸ್ರು ಸಾಕಮ್ಮನೋ ಬೇಕಮ್ಮಾನೋ ಅಂತ ಹೇಳೋದ್ರೊಳಗೆ ಟೈಮ್ ಆಗೋಗಿರತ್ತೆ" ಅಂದುಬಿಟ್ಟ. ಅವತ್ತಿಂದ ಇನ್ನು ಕುಗ್ಗಿ ಹೋದಳು ಸಾಕಮ್ಮ.
ಬೇರೆ ಯಾವ ಚಟುವಟಿಕೆ, ಹವ್ಯಾಸಗಳೂ ಇಲ್ದೇ ಬರೀ ಓದೊಂದೇ ಧ್ಯೇಯವಾಗಿರಿಸಿಕೊಂಡ ಸಾಕಮ್ಮ ಒಳ್ಳೆ ಮಾರ್ಕ್ಸ್ ತೆಗೆದು ಸ್ಕಾಲರ್ಶಿಪ್ ನಲ್ಲೇ ಕಾಲೇಜು ಶುರು ಮಾಡಿದ್ಲು. ಅಷ್ಟರಲ್ಲಿ ಈ ಹೆಸರಿನ ಕೀಳರಿಮೆ ಸ್ವಲ್ಪ ಕಡಿಮೆಯಾಗಿದ್ದು ಹೌದಾದರೂ ತನ್ನ ಗೆಳೆತಿಯರೆಲ್ಲಾ ಬಾಯ್ ಫ಼್ರೆಂಡ್ ಅಂತ ಸುತ್ತೋಕ್ಕೆ ಹೋಗೋದು, ಅವರ ಜೊತೆ ಮಂಜುನಾಥ ಚಾಟ್ಸ್ ಅಲ್ಲಿ ಕ್ಲಾಸ್ ಬಂಕ್ ಮಾಡಿ ಗ್ರೇಪ್ ಜ್ಯುಸ್, ಮಸಾಲೆ ಪೂರಿ ಮೆಲ್ಲೋದು ಎಲ್ಲಾ ನೋಡಿ ತನಗೂ ಯಾರಾದರೂ ಗೆಳೆಯ ಇದ್ದಿದ್ದ್ರೆ ಚೆನ್ನ ಅನ್ನಿಸಿದ್ದರೂ ಹುಡುಗರು ಅವಳ ಹೆಸರು ಕೇಳ್ತಿದ್ದ ಹಾಗೆ ಆಸಕ್ತಿ ಕಳೆದುಕೊಂಡು ಆಮೇಲೆ ಮಾತಾಡಿಸ್ತಾನೇ ಇರ್ಲಿಲ್ಲ ಅನ್ನೋದು ತಿಳಿದಮೇಲೆ ಅವಳು ಕನಸು ಕಾಣೋದು ಬಿಟ್ಲು.
ಪಿಯುಸಿ ಮುಗಿಸಿ ಇಂಜಿನಿಯರಿಂಗ್ಗೆ ಬರೋ ಹೊತ್ತಿಗೆ ತನ್ನ ಬೆನ್ನಿಗಂಟಿದ ಈ ಹೆಸರಿನ ಹಿಂಸೆಯಿಂದ ದೂರ ಹೋಗಬೇಕಾದರೆ ತಾನು ಸಪ್ತಸಾಗರ ದಾಟಿ ಹೊಸ ದೇಶಕ್ಕೆ ಹೋಗೋದೇ ಪರಿಹಾರ ಅಂತ ಸಾಕಮ್ಮ ನಿರ್ಧರಿಸಿದ್ದಳು. ಫ಼ಾರಿನರ್ಸ್ ಗೆ ಹಳೆ-ಹೊಸ ಎಲ್ಲಾ ಹೆಸರೂ ಒಂದೆ, ಆಗ ತಾನು ಮುಜುಗರ ಪಡಬೇಕಿಲ್ಲ ಎಂಬುದು ಅವಳ ಅಂಬೋಣ.
ಮನೆಯ ಕಷ್ಟದ ಪರಿಸ್ಥಿತಿ, ತನ್ನ ಹೆಸರಿನ ಕೀಳರಿಮೆಯ ನಡುವೆಯೂ ಸಾಕಮ್ಮ ಇಂಜಿನಿಯರಿಂಗ್ ಮುಗಿಸಿ ಒಂದು MNCಯಲ್ಲಿ ಕೆಲಸ ಗಿಟ್ಟಿಸಿಯೇಬಿಟ್ಟಳು. ಸರಿ ಇನ್ನೇನು ತನ್ನ ಭಾಗ್ಯದ ಬಾಗಿಲು ತೆಗೆದಂತೆಯೇ ಸೈ ಅಂದುಕೊಂಡ ಅವಳಿಗೆ ಕಂಪನಿಯ ಬಾಗಿಲು ತೆಗೆಯುವುದೇ ಪರಿಪಾಟಲಾಯಿತು. ಹಿಂದೆ ಮುಂದೆ ಇನಿಶಿಯಲ್, ಸರ್ ನೇಮ್ ಏನು ಇಲ್ಲದ ಸಾಕಮ್ಮ ಕಾಲೇಜಿನ ತನಕ ಎಲ್ಲಾ ಕಡೆ ಬರೀ ಸಾಕಮ್ಮ ಮಾತ್ರ ಆಗಿದ್ದವಳು. ಕಂಪನಿಗೆ ಸೇರಿದ ದಿನವೇ HR ಬಂದು ನಿಮ್ಮ ID ಕ್ರಿಯೇಟ್ ಮಾಡಕ್ಕೆ ಆಗ್ತಾ ಇಲ್ಲ, ಸಿಸ್ಟಮ್ಗೆ ಫ಼ಸ್ಟ್ ನೇಮ್ ಲಾಸ್ಟ್ ನೇಮ್ ಎರಡೂ ಬೇಕಾಗುತ್ತೆ, ನಿಮ್ಮ ಹೆಸ್ರು ಬರೀ ಸಾಕಮ್ಮ ಅಂತ ಇದೆ, ಬೇಕಿದ್ರೆ ನಿಮ್ಮ ಮೊದಲ ಹೆಸ್ರನ್ನೇ ಕೊನೆ ಹೆಸರೂ ಕೂಡ ಮಾಡಿ ID ಇಶ್ಯು ಮಾಡ್ತಿವಿ ಅಂದ್ರು. ಅಲ್ಲಿಗೆ ಸಾಕಮ್ಮ ಈಗ ಸಾಕಮ್ಮ ಸಾಕಮ್ಮ ಆದ್ಲು.
"ಏನೋ ಒಂದು ಹಾಳು ಬಡ್ಕೊಂಡು ಹೋಗ್ಲಿ, ಒಂದು ಸಾಕಮ್ಮ ಆದ್ರೇನು ಎರಡಾದ್ರೇನು" ಅಂತ ಒಪ್ಕೊಂಡವಳಿಗೆ ಒಂದಿನ ಮ್ಯಾನೆಜರ್, "ಪ್ರಾಜೆಕ್ಟ್ ಗೆ ಹೊರದೇಶಕ್ಕೆ ಕಳಿಸಬೇಕಾಗಿಬರಬಹುದು, ವೀಸಾಗೆ ಅಪ್ಲೈ ಮಾಡಿಸ್ತೀವಿ ಕಂಪನಿಯಿಂದ" ಅಂದಾಕ್ಷಣ ಅಂತು ತನ್ನ ಕನಸು ನನಸಾಗಿ ಕಷ್ಟ ಮುಗಿಯೋ ಸಮಯ ಬಂದೇ ಬಿಡ್ತು ಎಂದು ಹಿಗ್ಗಿದಳು.
US ವೀಸಾಗೆ ಅಪ್ಲೈ ಮಾಡುವಾಗ ಕೊನೆ ಹೆಸರಿಲ್ಲದ ಸಾಕಮ್ಮನಿಗೆ, ಕೊನೆ ಹೆಸರು ನಂತರ ಮೊದಲ ಹೆಸರು ಬರೆಯೋ ಅರ್ಜಿಯಲ್ಲಿ ಬರೆಯೋವಾಗ FNU (first name unknown) ಎಂದಾಗಿ ವೀಸಾ ಕೈಗೆ ಬಂತು. ಇರೋ ಹೆಸರೇ ಜೀವನದುದ್ದಕ್ಕೂ ಅಪಹಾಸ್ಯಕ್ಕೆ ಗುರಿಮಾಡಿದ್ದಲ್ದೆ ಈಗ ನೋಡಿದ್ರೆ ಮೊದಲ ಹೆಸರು ಗೊತ್ತಿಲ್ಲ ಎಂಬತಾಗಿದ್ದು ನೋಡಿ ಅವ್ಳಿಗೆ ಕಣ್ಣೀರೇ ಬಂತು. ಆಮೇರಿಕಾಗೆ ಹೋದ ಮೇಲೆ ನೋಡಿದರಾಯ್ತು ಬಿಡು ಅಂತ ತಾನೇ ಸಮಾಧಾನ ಮಾಡ್ಕೊಂಡು ಅಂತೂ ಫ಼್ಲೈಟ್ ಹತ್ತಿಯೇಬಿಟ್ಲು ನಮ್ಮ ಸಾಕಮ್ಮ ಅಲಿಯಾಸ್ ಸಾಕಮ್ಮ ಸಾಕಮ್ಮ ಅಲಿಯಾಸ್ FNU ಸಾಕಮ್ಮ!
ಅಮೇರಿಕಾಗೆ ಹೋಗಿದ್ದೇ ಅಲ್ಲಿ ಬ್ಯಾಂಕ್ ಅಕೌಂಟ್ ನಿಂದ ಹಿಡಿದು, ಕರೆಂಟು, ಗ್ಯಾಸು ಎಲ್ಲಾ ಅವಳ ವೀಸಾದಲ್ಲಿದ್ದ ಹೆಸರಿಗೇ ತಳುಕುಹಾಕಿಕೊಂಡಿದ್ದರಿಂದ ಸಾಕಮ್ಮ ಈಗ ಎಲ್ಲಾ ಕಡೆ FNU ಸಾಕಮ್ಮ ಆದ್ಲು. ಅಷ್ಟು ಸಾಲದು ಎಂಬಂತೆ ಆಫ಼ಿಸ್ ನಲ್ಲಿ, ನಾಲಿಗೆ ಹೊರಳದ ಅಮೇರಿಕನ್ನರು ಸಕ್, ಸ್ಯಾಕ್ ಎಂದೇನೇನೋ ಕರಿಯೋಕೆ ಶುರುವಾಗಿ ಅದು ಸಾಕಮ್ಮನಿಗೆ Sack ಎನ್ನಲು ತಾನೇನು ಗೋಣಿಚೀಲದ ತರಹ ಇದ್ದೇನೇ, ಅತ್ವ ಅದು ಕೆಲ್ಸದಿಂದ ತೆಗೆದು ಹಾಕೋ Sack ಅಲ್ಲವಷ್ಟೆ ಅಂತ ಗಲಿಬಿಲಿಯಾಗಿ ಮೈ ಪರಚಿಕೊಳ್ಳುವಂತಾಯ್ತು.
ಅಷ್ಟಕ್ಕೆ ನಿಲ್ಲಲಿಲ್ಲ ಪಾಪ ಸಾಕಮ್ಮನ ಹೆಸರಿನ ಗಾಥೆ. ನಾಯಿ ಬಾಲ ಯಾವಾಗ್ಲೂ ಡೊಂಕು ಅನ್ನೊಹಾಗೆ ತನ್ನ ಹೆಸ್ರು ಎಲ್ಲಿ ಹೋದ್ರು ಸೊಟ್ಟವೇ, ಅದಕ್ಕೆ ಇರುವ ಒಂದೇ ಉತ್ತರ ಹೆಸರನ್ನೇ ಬದಲಾಯಿಸಿಬಿಡೊದು. ಮುಂದಿನ ಸಲ ಭಾರತಕ್ಕೆ ಹೋದಾಗ ಹೆಸರು ಬದಲಾಯಿಸಿಯೇ ಸಿದ್ಧ ಅಂತ ನಿರ್ಧರಿಸಿದ ಸಾಕಮ್ಮನಿಗೆ ವೀಸಾ ಕಿರಿಕಿರಿಯಿಂದ ಮುಂದೆ 5 ವರ್ಷ ಭಾರತಕ್ಕೆ ಬರಲಾಗಲೇ ಇಲ್ಲ.
ಅಷ್ಟ್ರಲ್ಲಿ ಊರಲ್ಲಿದ್ದ ಅಪ್ಪ ಅಮ್ಮ "ಕೊನೆಯವಳು, ನೀನ್ನೊಬ್ಬಳ ಮದುವೆ ಮಾಡಿ ಜವಾಬ್ದಾರಿ ಕಳ್ಕೊತೀವಿ" ಅಂತ ಅವಳ ಮೇಲೆ ಮದುವೆ ಒತ್ತಡ ಹೇರಲು ಶುರು ಮಾಡಿದ್ದರು. ಶಾದಿ.ಕಾಮ್ ಅಲ್ಲಿ ಸಿಕ್ಕ ಗಂಡೊಬ್ಬ "ನಿಮ್ಮ ಪ್ರೊಫೈಲ್ ನಲ್ಲಿ ಫೋಟೊ ಇರಲಿಲ್ಲ, ಹೆಸ್ರು ಕೇಳಿ ಯಾರೋ ಹಳ್ಳಿ ಗುಗ್ಗು ಅಂದ್ಕೊಂಡಿದ್ದೆ ನೀವು ನೋಡಿದ್ರೆ ಫ಼ುಲ್ ಸ್ಟೈಲ್ ಆಗಿದೀರ" ಎಂದಿದ್ದು ಕೇಳಿ ನಖಶಿಖಾಂತ ಉರಿದ ಸಾಕಮ್ಮ ಅವನಿಗೆ ಬೇಡ ಅಂತ ನಿರಾಕರಿಸಿದ್ಲು. ಅಲ್ಲಿರುವ ಅತೀ ಮಾಡರ್ನ್ ಹುಡುಗರು ಒಬ್ಬರೂ ಸರಿಬಾರದೆ, ಇಂಡಿಯಾದಲ್ಲಿರೋ ಸಂಪ್ರದಾಯಸ್ತ ಮನೆತನದ ಹುಡುಗರೊಟ್ಟಿಗೂ ಯಾಕೋ ಹೊಂದಾಣಿಕೆಯಾಗದೆ ತನ್ನ ಮದುವೆಯ ಕಥೆಯೂ, ತನ್ನ ಹೆಸರಿನ ಹಾಗೆ ಎಲ್ಲಿಯೂ ಸಲ್ಲದ, ದಿಕ್ಕಿಲ್ಲಿದ ಪರದೇಸಿಯಾಗ್ತಿದೆಯಲ್ಲಾ ಅನ್ನಿಸಿ ಕಸಿವಿಸಿಯಾಯ್ತು.
ಕೊನೆಗೂ 5 ವರ್ಷದ ನಂತರ ಭಾರತಕ್ಕೆ ಮರಳಿದ ಸಾಕಮ್ಮ ಮಾಡಿದ ಮೊದಲ ಕೆಲಸ ಹೆಸರು ಬದಲಾಯಿಸಿಕೊಳ್ಳಲು ಅರ್ಜಿ ಗುಜರಾಯಿಸಿದ್ದು. ಆಗಿನ್ನೂ "ಕಿರಿಕ್ ಪಾರ್ಟಿ" ಪಿಚ್ಚರ್ ನೋಡಿ ಇಂಪ್ರೆಸ್ ಆಗಿದ್ದ್ರಿಂದ ಅದ್ರಲ್ಲಿ ಹೀರೊಯಿನ್ ಗೆ ಇದ್ದ ಸಾನ್ವಿ ಹೆಸರನ್ನ ತನ್ನ ಜೀವನಕ್ಕೆ ಬರಮಾಡಿಕೊಂಡೇ ಬಿಟ್ಲು.
ಇನ್ನೇನು ಸುಖಾಂತ್ಯ ಆಯ್ತಲ್ಲ ಕಥೆ ಅಂತೀರಾ? ಹೆಸರು ಬದಲಾಗ್ತಿದ್ದ ಹಾಗೆ ಜೀವನ ಬದಲಾಗುತ್ಯೇ ಸ್ವಾಮಿ? ಭಾರತದಲ್ಲಿದ್ದ ಕುಟುಂಬ, ಗೆಳೆಯರ ಬಳಗಕ್ಕೆಲ್ಲಾ ಅವಳು ಸಾಕಮ್ಮನೇ ಆಗಿ ಉಳಿದು ಅವಳನ್ನ ಯಾರೂ ಸಾನ್ವಿ ಅಂತ ಕರೀಲೇ ಇಲ್ಲ. ಮನೆಗೆ ಹೋಗಿದ್ದೇ ಅವ್ರ ಅಜ್ಜಿ, "ಬಾಣಾವರದ ಹತ್ರ ನಾಗಸಮುದ್ರದಲ್ಲಿ ತಮ್ಮ ಮನೆದೇವರಾದ ಸಾಕಮ್ಮ ದೇವಿ ಇದ್ದಾಳೆ, ಇಷ್ಟು ಚೆನ್ನಾಗಿದ್ದ ಹೆಸ್ರನ್ನ ಬಿಟ್ಟು ಅದೆಂತದೋ ಸಾವನಿ (ಅವ್ರಜ್ಜಿಗೆ ಹೇಳೊಕ್ಕೆ ಬಂದಿದ್ದೇ ಹಾಗೆ) ಅಂತ ಹೆಸ್ರು ಬದಲಾಯಿಸ್ಕೊಂಡ್ಯಲ್ಲೆ ನಮ್ಮವ್ವ" ಅಂತ ಮುಸಿ-ಮುಸಿ ಮಾಡಿದರು. ಎಲ್ಲೇ ಹೋದ್ರು ಸಿಕ್ಕ ಗೆಳೆಯರು, ಹಳೆ ಸ್ಕೂಲ್ ಟಿಚರ್ಸ್ ಎಲ್ಲಾ ನೀನು ಸಾಕಮ್ಮ ಅಲ್ವಾ? ಅಂತ ಮಾತಾಡ್ಸೋದು ನಡೆದೇ ಇತ್ತು. ಕೊನೆಗೆ ಅಮೇರಿಕಾಗೆ ವಾಪಸ್ ಹೋದ ಮೇಲೆ ಅವ್ರ ನಾಲಿಗೆಯಲ್ಲಿ ಮತ್ತೊಮ್ಮೆ ಅಪಭ್ರಂಶಗೊಂಡ ಅವಳು ಈಗ ಸ್ಯಾನ್, ಸಾನ್ ಹೀಗೆ ಏನೇನೋ ಆಗಿ ಹೋದ್ಲು.
ಅಷ್ಟ್ರಲ್ಲಿ ಮೂವತ್ತು ದಾಟಿದ್ದ ಸಾಕಮ್ಮ ಅಲಿಯಾಸ್ ಸಾನ್ವಿ ಅಲ್ಲಿ ಭಾರತದಲ್ಲಿಯೂ ಸಲ್ಲದೇ ಅಮೇರಿಕಾದಲ್ಲೂ ಪೂರ್ತಿಯಾಗಿ ಬೆರೆಯದೇ, ತನ್ನ ಜೀವನಕ್ಕೂ ತನ್ನ ಎಡಬಿಡಂಗಿಯಾದ ಸಾಕಮ್ಮ-ಸಾನ್ವಿ ಹೆಸರಿಗೂ ಏನಾದರೂ ತಳುಕಿದೆಯೇ ಎಂದು ಯೋಚಿಸಿ ಕೊನೆಗೆ ಹೆಸರು ಏನಾದ್ರೂ ಕರ್ಕೊಳ್ಳಲಿ ವ್ಯಕ್ತಿ ಮಾತ್ರ ತಾನೇ ಅಲ್ಲವೇ ಎಂಬ ಒಂದು ನಿರ್ಲಿಪ್ತ ಭಾವಕ್ಕೆ ಶರಣಾದಳು.
Comments
Post a Comment