ಅಜ್ಜಿಯ ನೆನಪು!

ಯಾಕೋ ಇತ್ತೀಚಿಗೆ ಅಜ್ಜಿಯ ನೆನಪು ಹೆಚ್ಚಾಗಿಯೇ ಕಾಡ್ತಿದೆ. ಹದಿಮೂರಕ್ಕೆ ಮದುವೆಯಾಗಿ 12 ಮಕ್ಕಳ  ತಾಯಿಯಾದ, ಸಣ್ಣ ವಯಸ್ಸಿಗೆ ಗಂಡನ ಕಳೆದುಕೊಂಡು ಬದುಕಿಡೀ ಮಕ್ಕಳು ಮೊಮ್ಮೊಕ್ಕಳ ಸೇವೆಯಲ್ಲೇ ಜೀವನ ಕಳೆದ ಅಜ್ಜಿ 5 ವರ್ಷದ ಹಿಂದೆ ತೀರಿಕೊಂಡಾಗ ಅವಳಿಗೆ ಆಜುಬಾಜು 96.

ಏಳು ಹೆಣ್ಣಿನ ನಂತರ ಹುಟ್ಟಿದ ಮೊದಲ ಗಂಡೇ ನನ್ನಪ್ಪ. ಮನೆತುಂಬ ಅಕ್ಕ-ತಂಗಿಯರ ಜವಾಬ್ದಾರಿ, ಏನಾದರು ಮಾಡಲೇಬೇಕೆಂಬ ತುಡಿತದ  ಅಪ್ಪ ಮಿಲ್ಟ್ರಿ ಸೇರಿದಾಗ ಅವನಿಗೆ 16. ದೊಡ್ಡ ಮಗ ಕೈಬಿಟ್ಟಂತೇ, ಮಿಲ್ಟ್ರಿಗೆ ಹೋದೋರು ಯಾರೂ ಜೀವಂತ ವಾಪಾಸ್ ಬರೋದೇ ಇಲ್ಲ ಎಂಬಂತಿದ್ದ ಆ ಕಾಲದಲ್ಲಿ ಅಜ್ಜಿ ಗಟ್ಟಿ ಮನಸ್ಸು ಮಾಡಿ ಕಳಿಸಿಕೊಟ್ಟಿದ್ದರಂತೆ. ಕನ್ನಡವೊಂದು ಬಿಟ್ಟರೆ ಬೇರೆ ಭಾಷೆ ಬಾರದ ಅಪ್ಪ ಮಿಲ್ಟ್ರಿ ಸೇರಿದಾಗ 'ಅಮ್ಮ ನಂಗೆ ಹಿಂದೀಲಿ ಉಪ್ಪಿಗೆ ಎಂತ ಹೇಳ್ತಾ ಹೇಳಿ ಗೊತ್ತಿಲ್ಲೆ. ಅದ್ಕೆ ಒಂದೊಂದು ಸಲ ಉಪ್ಪು ಕಮ್ಮಿ ಇದ್ರೂ ಹಂಗೆ ಊಟ ಮಾಡ್ತಾ ಇದ್ದಿ' ಎಂದು ಕಾಗದ ಬರೆದಿದ್ದನ್ನು ಅಜ್ಜಿ ತುಂಬಾ ಸಲ ನೆನೆಸಿಕೊಂಡು ಹೇಳುತ್ತಿದ್ದರು.
ಮೊದಲ ಗಂಡು ಮಗನಿಗೆ ನಾವಿಬ್ಬರೂ ಹೆಣ್ಣು ಮಕ್ಕಳೇ ಆದರೂ ಒಂದು ದಿನವೂ ಆಕೆ ನಮ್ಮನ್ನು ಅಸಡ್ಡೆಯಿಂದ ನೋಡಿದ್ದಿಲ್ಲ. ಪ್ರತಿ ಸಲ ಮನೆಯಿಂದ ಶಿವಮೊಗ್ಗೆಗೆ ಹೊರಡುವಾಗಲೂ 'ಮತ್ತ್ಯಾವಾಗ ಬತ್ತ್ಯೇ ಪುಟ್ಟಿ?' ಎಂದು ಕೇಳುತಿದ್ದ ಆಕೆಯ ಅಸೆ ಕಂಗಳು ನಂಗಿನ್ನೂ ನೆನಪಿವೆ.

ಗಂಡ ಎಳವೆಯಲ್ಲೇ ತೀರಿಹೋಗಿದ್ದರೂ ಆಕೆಯ ಇನ್ನೊಬ್ಬ ತಂಗಿಯಂತೆ ತಲೆ ಬೋಳಿಸಿಕೊಳ್ಳದೆ ನೀಟಾಗಿ ಕೂದಲು ಬಾಚಿ ಗಟ್ಟಿಯಾಗಿ ತುರುಬು ಕಟ್ಟಿಕೊಳ್ಳುತ್ತಿದ್ದಳು. ತೊಂಬತ್ತರ ವಯಸ್ಸಿನವರೆಗೂ ತನ್ನ ಬಟ್ಟೆ-ಬರೆ ತಾನೇ ತೊಳೆಯುತಿದ್ದಳು. ಮನೆಯಲ್ಲಿ ಮಡಿ -ಮಡಿಯೆಂದು ಓಡಾಡುತ್ತಿದ್ಧ ಅಜ್ಜಿ ಶಿವಮೊಗ್ಗಕ್ಕೆ ನಮ್ಮೆನೆಗೆ ಬಂದಾಗ ಮಾತ್ರ ಅನ್ನದ ಪಾತ್ರೆ ಮುಟ್ಟಿದ ಕೈಯಲ್ಲಿ ಸಾರಿನ ಪಾತ್ರೆ ಮುಟ್ಟಿದರೂ ಏನೂ ಹೇಳದ್ದಿದುದೇ ನನಗಾಗ ಸೋಜಿಗ. ಯಾಕೆಂದು ಕೇಳಿದಾಗ 'ಪ್ಯಾಟೆಲೆಲ್ಲಾ ಎಂತ ಮಡಿ ತಗಳೇ' ಎಂದಿದ್ದಳು!

ನಾವು ಊರಿಗೆ ಹೋದಾಗಲೆಲ್ಲಾ ತಲೆ ಸ್ನಾನ ಮಾಡಿಸುವಾಗ ಅವಳು ನಮ್ಮ ತಲೆಯೇ ಕಿತ್ತುಬರುವಂತೆ ಸೀಗೆಪುಡಿ ಹಾಕಿ ತಿಕ್ಕುತ್ತಿದ್ದಿದ್ದು ನೆನೆಸಿಕೊಂಡರೆ ಈಗಲೂ ಭಯ ತರಿಸುತ್ತದೆ. ಒಮ್ಮೊಮ್ಮೆ ಅಮ್ಮ ತಿಕ್ಕುವಾಗ 'ಅದೆಷ್ಟ್ ಜೋರಾಗಿ ತಿಕ್ತ್ಯೇ' ಅಂತ ಅಲವತ್ತುಗೊಂಡರೆ ಆಕೆ 'ಹೌದೌದು ನಿಂಗೆ ಅಜ್ಜಿಯೇ ಸರಿ, ಗಪ್ ಚುಪ್ ಹೇಳಿ ಕೂತಿರ್ತೇ' ಎಂದು ಬೈಯುತ್ತಿದ್ದಳು!

ಶಾಲೆಗೆ ಹೋಗದಿದ್ದರೂ ಓದಲು ಕಲಿತಿದ್ದ ಅಜ್ಜಿ ದಿನಾಲೂ ಬರುವ ಪತ್ರಿಕೆಯನ್ನು ಚಾಚೂತಪ್ಪದೆ ಓದುತಿದ್ದಳು. ರಾಜಕೀಯ, ಕ್ರೀಡೆ ಎಲ್ಲ ರಂಗದಲ್ಲೂ ಆಗುಹೋಗುಗಳ ಪರಿಚಯವಿತ್ತು. ಸ್ಕೂಲಿನ ಮಾರ್ಕ್ಸು ರಾಂಕಿನ ಪರಿಚಯವಿಲ್ಲದ ಅಜ್ಜಿ ಕೇಳುತಿದ್ದ ಒಂದೇ ಪ್ರಶ್ನೆ - ಫಸ್ಟ್ ಕ್ಲಾಸ್ನಲ್ಲಿ ಪಾಸಾದೆವೋ ಇಲ್ಲವೋ ಎಂದು ಮಾತ್ರ. ನಾನು MBA ಮುಗಿಸಿ ಕೆಲಸಕ್ಕೆ ಸೇರುವಷ್ಟರಲ್ಲಿ ಅವಳಿಗೆ ಇಲ್ಲಿನ ಸ್ವಾಧೀನ ತಪ್ಪಿತ್ತು.  ಮೊಮ್ಮೊಕ್ಕಳು ತುಂಬಾ ಓದಿ ದೊಡ್ಡ ಕೆಲಸಕ್ಕೆ ಸೇರಬೇಕಂಬ ಅವಳ ಆಸೆ ಮಾತ್ರ ನಮ್ಮನ್ನು ಯಾವತ್ತೂ ಹಿಡಿದಿಟ್ಟಿದ್ದು ಸುಳ್ಳಲ್ಲ.

ಮಾಡಿ-ಮಡಿಯೆಂದು ಮನೆಯನ್ನೆಲ್ಲಾ ಯಾವಾಗಲೂ ತೊಳೆದು-ಬಳಿಯುತ್ತಲೇ ಇರುತ್ತಿದ್ದ ಅಜ್ಜಿ ಮನೆಯ ಕೆಲಸದ ಆಳುಗಳಿಗೆ ಸ್ವಲ್ಪ ಕಿರಿಕಿರಿಯೇ. ಚಾ ಕುಡಿದ ಲೋಟ ತೊಳೆದು ಹೊರಗೆ ಅದರ ಜಾಗದಲ್ಲೇ ಇಡಬೇಕು. ಅಂಗಳ ಪೂರ್ತಿ ಸಗಣಿ ಹಾಕಿಯೇ ಬಳಿಯಬೇಕು ಎಂದೆಲ್ಲ ಅವಳ ಖಡಕ್ ರೂಲ್ಸ್. ದಶಕಗಳ ಕಾಲ ಕೆಲಸಕ್ಕೆ ಬಂದ ಗೌರಿಗೆ ಅಜ್ಜಿಯಂತೆಯೇ ವಯಸ್ಸಾಗಿ ಅವಳು ಮನೆಕೆಲಸ ನಿಲ್ಲಿಸಿದ ಮೇಲೂ ಅಗ್ಗ್ಯಾಗೆ ಅಜ್ಜಿ ಅವಳಿಗೆ ಹೇಳಿಕಳಿಸಿ 'ಗೌರಿ ಒಂಚೂರು ಅಂಗಳ ಬಳಿದುಕೊಡೆ, ನಿನ್ನಷ್ಟು ಚಂದ ಯಾರು ಕೆಲಸ ಮಾಡುದಿಲ್ಲ' ಎಂತಲೋ, 'ರಾಮ ತ್ವಾಟದ ಮರದಿಂದ ಎರ್ಡು ಹಲಸಿನಹಣ್ಣು ಕಿತ್ಕಬಾರ, ಮಕ್ಕಳು ಬಂದಾವೇ ಮನಿಗೆ, ಹಂಗೆ ನೀನು ಒಂದು ಮನಿಗೆ ತಕ್ಕಂಡು ಹೋಗು' ಅನ್ನುವಾಗ ಅವಳು ತೋರುತ್ತಿದ್ದ ಕಾಳಜಿ ಈಗ ಬರಿ ನೆನಪು.

ಬೆಕ್ಕು-ನಾಯಿಗಳೆಂದರೆ ಆಗದ ಅಜ್ಜಿ ಅವು ಒಳಗೆ ಬಂದಾಕ್ಷಣ 'ಪ್ರಾರಬ್ಧ, ದೇವ್ರ ಕೋಣೆಗೆ ಬತ್ತು' ಎಂದು ಹೊಡೆದು ಓಡಿಸುತ್ತಿದುದು ನಿಜವಾದರೂ ಅವಕ್ಕೆ ಸ್ವಲ್ಪ ಹುಷಾರು ತಪ್ಪಿದರೂ ಚಿಕ್ಕಪ್ಪನಿಗೆ ಉಳ್ಳೂರಿನ ದನದ ಡಾಕ್ಟ್ರ ಹತ್ರ ಔಷಧಿ ತರಲು ಕಳಿಸುತ್ತಿದ್ದಳು. ಅವಳು ಬೆಕ್ಕು-ನಾಯಿಗೆ ಹೆಸರಿಡುವುದೇ ಒಂದು ತಮಾಷೆ. ಹಳೆ ಬೆಕ್ಕು ಅಥವಾ ನಾಯಿ ಸತ್ತು ಮನೆಗೆ ಹೊಸದು ಬರುತ್ತಿದಂತೆ ಅದಕ್ಕೆ ಹೆಸರಿಡುವುದು ಅಜ್ಜಿಯೇ. ಒಮ್ಮೆ ನಾಯಿಗೆ ಅವಳಿಟ್ಟ ಹೆಸರು ಲಚ್ಚಿ! 'ಇದೆಂತದೆ ಅಜ್ಜಿ ಹೊಲೇರ ಹೆಸರಿದ್ದಂಗ್ ಇದ್ದು' ಎಂದಿದ್ದಕ್ಕೆ ಬೈದು ಅದು ಲಕ್ಷ್ಮಿ ಎಂದು ಸುಮ್ಮನಾಗಿಸಿದ್ದಳು.

ಅಜ್ಜಿಯನ್ನು ಖುಷಿಪಡಿಸುವುದು ತುಂಬಾ ಸುಲಭವೇ. ದಶಕಗಳ ಕಷ್ಟ ನೋಡಿದ, ಕಪ್ಪಾಗಿ ಮುರುಟಿಹೋದ ಅವಳ ಕಾಲಿನ ಉಗುರು ತೆಗೆಯುವುದು ಅಂದರೆ ಅವಳಿಗೆ ಸ್ವಲ್ಪ ಕಷ್ಟ. ಊರಿಗೆ ಹೋದಾಗಲೆಲ್ಲ ನಾ ಮಾಡುತ್ತಿದ್ದ ಕೆಲಸ ಅವಳ ಕಾಲುಗುರು ಕತ್ತರಿಸುವುದು. ವರ್ಷದಲ್ಲೊಮ್ಮೆ ಮಾಡಿದ ಕೆಲಸ ಆಕೆ ಎಲ್ಲರಿಗೂ ವರ್ಷಪೂರ್ತಿ ಖುಷಿಯಿಂದ ಹೇಳುತ್ತಿದ್ದಳು. ದೊಡ್ಡ ಮೊಮ್ಮಗಳು ಯಾವಾಗಲೋ ಹರಿದು ಹೋದ ಕಿಟಕಿಯ ಪರದೆ ಹೊಲೆದುಕೊಟ್ಟಿದ್ದು, ಅವಳ ದಿಂಬಿನ ಕವರಿನ ಮೇಲೆ ೫ನೇ ಮಗಳ ಸೊಸೆ ಕಸೂತಿ ಮಾಡಿಕೊಟ್ಟಿದ್ದು, ಬೆಂಗಳೂರಿನಲ್ಲಿರುವ ಕೊನೆಯ ಮಗಳು ಬೆನ್ನುಜ್ಜುವ ಬ್ರಷ್ ತಂದಿದ್ದು ಎಲ್ಲವೂ ಅಜ್ಜಿಯೆಯ ಪ್ರಕಾರ ದೊಡ್ಡದೇ.

ಅಷ್ಟೆಲ್ಲಾ ಮಕ್ಕಳನ್ನು ಹೆತ್ತಿದ್ದ ಅಜ್ಜಿಗೆ ಗರ್ಭಕೋಶದ ಸಮಸ್ಯೆಯಾಗಿ ಕೊನೆಗೆ ಅದನ್ನು ತೆಗೆದೇ ಹಾಕಿದ್ದರು. ಬೇರೆಲ್ಲವೂ ಸರಿಯಿದ್ದ ಅಜ್ಜಿಗೆ ಕೊನೆಗಾಲದಲ್ಲಿ ಡಾಕ್ಟರ್ ಕ್ಯಾನ್ಸರ್ ಎಂದರೂ ತೊಂಬತ್ತರ ಮೇಲಾದ ದೇಹದಲ್ಲಿ ಕ್ಯಾನ್ಸರ್ ಹರಡಲೂ ಶಕ್ತಿಯಿಲ್ಲ. ಪೈನ್ ಕಿಲ್ಲರ್ಸ್ ಬಿಟ್ಟು ಬೇರೇನೂ ಮಾಡಲಾಗದು ಎಂದು ಕೈ ಚೆಲ್ಲಿದ್ದರು. ಡಾಕ್ಟರ್ ಮನೆಗೆ ಹೋಗುವಾಗಲೂ ರೇಷ್ಮೆ ಸೀರೆಯುಟ್ಟೇ ಹೋಗುತ್ತಿದ್ದ ಅಜ್ಜಿ ಕೊನೆಗೆ ದಿನವಿಡೀ ನೈಟಿಯಲ್ಲೇ ಇರುವಂತಾದಳು. ಸಾಯುವ ಕೊನೆಯ ೬ ತಿಂಗಳು ಅರಳು-ಮರುಳಾಗಿ ಯಾರನ್ನು ಗುರುತು ಹಿಡಿಯದೆ ಅವಳನ್ನು ನೋಡಲು ಬಂದ ಎಲ್ಲರ ಕಣ್ಣಲ್ಲೂ ನೀರು ತರಿಸಿದ್ದಳು.

ಆಗ ತಾನೇ ಕಾಲೇಜು ಮುಗಿಸಿ ರಜಕ್ಕೆ ಮನೆಗೆ ಬಂದಿದ್ದ ನನಗೆ ಅವಳ night duty ಬಿದ್ದಿತ್ತು. ಯಾರಾದರೂ ಒಬ್ಬರು ಅವಳ ಜೊತೆ ಇರಲೇ ಬೇಕಾಗುತ್ತಿತ್ತು. ಕೊನೆ ಕೊನೆಗೆ ಮೈಮೇಲಿನ ಬಟ್ಟೆ ಎಲ್ಲ ಬಿಚ್ಚಿ ಬೆತ್ತಲೆ ಕೂತುಬಿಡುತ್ತಿದ್ದಳು. ಬಟ್ಟೆಯಲ್ಲೇ ಮಲ-ಮೂತ್ರವಾದರೂ ಅದನ್ನು ತೆಗೆಯಲೂ ಬಿಡದೆ ಮಕ್ಕಳಂತೆ ಹಠ ಮಾಡುತ್ತಿದ್ದಳು. ಹೀಗೇ ಒಮ್ಮೆ ರಾತ್ರಿ 3ರ ಸುಮಾರಿಗೆ ನನಗೆ ನಿದ್ಧೆ ತಡೆಯದೆ ಕೆಣ್ಣೆಳೆಯುತ್ತಿರಲು ಅಜ್ಜಿ ಹಾಕಿದ್ದ ನೈಟಿಯಲ್ಲೇ ಮೂತ್ರ ಮಾಡಿದ್ದು ಗೊತ್ತಾದಂತೆ ಅದನ್ನು ಬಿಚ್ಚಲು ಹೋದೆ. ಎಲ್ಲಿಂದಲೋ ನನ್ನ ಕೈ ಗಟ್ಟಿ ಹಿಡಿದ ಅಜ್ಜಿ ನನಗೆ ಅಲುಗಾಡಲೂ ಬಿಡಲಿಲ್ಲ. 'ಅಜ್ಜಿ ಬಟ್ಟೆ ಬಿಚ್ತಿ' ಎಂದರೂ ಕೆಳದೇ ಅವಳ ಚೂಪಾದ ಉಗುರಿನಿಂದ ನನ್ನ ಕೈಯನ್ನು ಚುಚ್ಚತೊಡಗಿದಳು. 'ಅಜ್ಜಿ ಬಿಡು ಕೈ' ಎಂದು ನೋವು ತಡೆಯಲಾರದೆ ಅವಳ ಕೈ ಮೇಲೊಂದು ಮೆಲು ಏಟು ಕೊಟ್ಟೆ. ಶಾಕ್ ಆದವಳಂತೆ ಆಕೆ ಕೈ ಬಿಟ್ಟಳು. ಜೀವಮಾನದಲ್ಲಿ ಒಮ್ಮೆಯೂ ನನಗೆ ಹೊಡೆಯದ ಅಜ್ಜಿಯ ಮೇಲೆ ಮೆಲುವಾಗಿಯಾದರೂ ನಾನು ಅಂದು ಏಟು ಕೊಟ್ಟಿದ್ದು ನನಗೆ ಈಗಲೂ ಕಾಡುತ್ತದೆ. ಇನ್ನೊಂದು ಅವಕಾಶ ಸಿಕ್ಕಿದರೆ  'ಅಜ್ಜಿ ಕ್ಷಮಿಸಿಬಿಡು' ಎಂದು ಕೇಳುತ್ತಿದ್ದೆನೇನೋ ಆದರೆ ಅಷ್ಟರಲ್ಲೇ ಅಜ್ಜಿ ಇನ್ನು ಸಾಕೆಂದು ಹೊರಟು ನಿಂತಳು.

ಮನೆಯ ಒಳಗೆ ಕಾಲಿಡುತ್ತಿದ್ದ ಹಾಗೆ ಅಜ್ಜಿ... ಎಂದು ಕೂಗಿ ಅವಳನ್ನು ಹುಡುಕಿಕೊಂಡು ಹೋಗುವ ಅಭ್ಯಾಸ ಹೋದ ವರ್ಷ ಅಜ್ಜಿ ಇಲ್ಲದ ಮನೆಗೆ ಹೋದಾಗಲೂ ಬಿಡದೆ ಕೊನೆಗೆ ಅಜ್ಜಿ ನನ್ನ ಕರೆಗೆ ಇನ್ನೆಂದೂ ಓಗೊಡಳು ಎಂದು ಅರಿವಾದೊಡನೆ ಮಂಜಾದ ನನ್ನ ಕಣ್ಣು ಅವಳ ಕೋಣೆಯ ಕತ್ತಲಲ್ಲಿ ಕರಗಿಹೋಗಿತ್ತು.



Comments

  1. ಯೋಚನೆಗಳಲ್ಲೇ ಎಲ್ಲವನ್ನು ಚಿತ್ರಿಸಿ ನೋಡಿ ಮಂತ್ರಮುಗ್ಧನಾದೆ

    ReplyDelete
  2. yeshT chennagi badidiya...tumba ishTa aitha...i could visualize every word.

    ReplyDelete
  3. ಭಾವುಕನಾಗಿ ಮಾಡಿದಿರಿ.. ವಸುಧೇಂದ್ರ ಅವರ ಅಮ್ಮ ಅಂದ್ರೆ ನಂಗಿಷ್ಟ ..ನೆನಪಾಯಿತು...

    ReplyDelete
  4. ಬಹಳ ಚೆನ್ನಾಗಿದೆ!

    ReplyDelete
  5. ಸೊಗಸಾದ ಸುಂದರ ಬರಹ. ಅಜ್ಜಿ ಕಣ್ಣೆದುರು ಬಂದು ಹೋಯಿತು. ಕೊನೆಯ ಭಾಗ ಓದುವಾಗ, ನನ್ನ ತಂದೆಗೆ ಹಠ ಮಾಡುತ್ತಾರೆಂಬ ಕಾರಣಕ್ಕೆ ನಾನು ಮೆಲುವಾಗಿ ಗದರಿದ್ದು ನೆನಪಿಗೆ ಬಂತು. ಅದು ಇಂದಿಗೂ ಕಾಡುವ ನೆನಪಾಗಿ ನನ್ನಲ್ಲಿ ಉಳಿದಿದೆ.

    ReplyDelete
  6. ತುಂಬಾ ಚೆನ್ನಾಗಿ ಮೂಡಿ ಬಂದಿದೆ.

    ReplyDelete
  7. Ajji nenapu hejjenu savidhanthe. Ajjige vidhye illdhe hodru thilvalke jasthi, odhdhe odhru yella artha agthithu. Jeevnakke vidhyegitha thilvalke mukya antha gothaglikke nang isht varshagalaythu. I miss her in this city of highly educated insensitive crowd. Few a times I envy her meaning full life, worthy of living. Nan ajjidhu almost similar vekthithva and namdhu shimoga jilleya ondh putta halli. Besige yalli aval nenapu mathashtu gaada. Avalu madidha happala onagisidhare Sabanna na bali ice candy, sutta godambi kai , peppermint sigthithu.even with MBA degree u cant manage the house like she did. Her planning and preparation for rainy seasons is nothing less than planning committee chairman, sending hapla dhindha ididhu ole saudhe thanka ella perfect. Naanu Bhagavad-Gita odhir bohuda Andre avalu badhuki thorsidhale. In this age of artificial intelligence and natural stupidity ,ajjiya nede ,nudi ,achara, vichara, vaicharikathe bahala nenapaguthe ...

    ReplyDelete
  8. :(
    ಹೆಚ್ಚುಕಮ್ಮಿ ನಿಮ್ಮ ಅಜ್ಜಿಯ ಹಾಗೇ ಕೊನೆಗಾಲದ ಅರಳು-ಮರಳಿಗೆ ತುತ್ತಾಗಿರೋ ನನ್ನ ಅಮ್ಮಮ್ಮ ಕಣ್ಮುಂದೆ ಬಂದ. ಚಂದಾಯ್ದು ಬರ್ದಿದ್ದು.

    ReplyDelete
  9. ಎಷ್ಟು ಚಂದವಿದೆ ಬರಹ !! ಪ್ರತಿ ಸನ್ನಿವೇಶವೂ ಕಣ್ಣಿಗೆ ಕಟ್ಟಿದಂತಿತ್ತು.

    ReplyDelete

Post a Comment

Popular posts from this blog

ಸಾಕಮ್ಮ

Enchanting Elaneer Falls!