ಹೀಗೆ ಇನ್ನೊಂದು ಮಲೆನಾಡ ಕಥೆ

ಈ ಮಲೆನಾಡಿನ ಕಥೆಗಳೆ ಹೀಗೆ. ಒಮ್ಮೆ ಹಿಡಿದರೆ ಬಿಡದ ಜಡಿಮಳೆಯಂತೆ. ಹೊಂಡವ್ಯಾವುದು ರಸ್ತೆ ಯಾವುದು ಎಂದು ತಿಳಿಯದಂತೆ ಯಾವುದು ಕಾಲ್ಪನಿಕ ಯಾವುದು ನಿಜ ಎಂದೂ ಒಮ್ಮೊಮ್ಮೆ ಅನುಮಾನ ಕಾಡುತ್ತದೆ.


ಬೇಸಿಗೆ ಬಂತೆಂದರೆ ಸೈ ಸಾಗರದ ಹತ್ತಿರದ ಅಜ್ಜಿಯ ಮನೆಯಲ್ಲಿ ಇನ್ನೆರೆಡು ತಿಂಗಳು ಠಿಕಾಣಿ. ಅಜ್ಜಿ ಮಾಡಿದ ಸೌತೆ ದೋಸೆ, ಒಡಪೆ ತಿಂದು ಮಾವನ ಬಳಿ ಕವಳಿಕಾಯಿ ಮಾವಿನಕಾಯಿ ಕುಯ್ಯಲು ಕರೆದೊಯ್ಯಲು ಪೀಡಿಸುತ್ತಾ ಹೊಂಡದಲ್ಲಿ ಈಸುತ್ತೇನೆಂದು ಹೋಗಿ ಬಟ್ಟೆಯೆಲ್ಲಾ ಒದ್ದೆ ಮಾಡಿಕೊಂಡು ಬರುವುದು ಒಂಥರಾ ಪ್ರತೀ ವರ್ಷದ ಸಂಪ್ರದಾಯವೇ ಆಗಿಹೋಗಿತ್ತು. 
ಅಡಿಕೆ ತೋಟವೆಂದ ಮೇಲೆ ದಿನಾಗಲೂ ಏನಾದರೂ ಕೆಲಸವಿದ್ದೇ ಇರುತ್ತದೆ. ಗೊಬ್ಬರ ಹಾಕಿಸುವುದೋ ಮರಕ್ಕೆ ಔಷಧಿ ಸಿಂಪಡಿಸುವುದೋ ಇಲ್ಲ ಕಳೆ ಕೀಳುವುದೋ ಹೀಗೆ. ಒಂದು ಗಂಡಾಳು ಮತ್ತು ಒಂದು ಹೆಣ್ಣಾಳು ಎಲ್ಲಾ ತೋಟದಲ್ಲೂ ಖಾಯಮ್ಮು. ಆದರೆ ದುಡ್ಡಿಗೆ ತಕ್ಕಂತೆ ಇವರ ನೀಯತ್ತು ಬದಲಾಗುತ್ತಿರುವುದರಿಂದ ಈ ವರ್ಷ ನಮ್ಮನೆಯಲ್ಲಿದ್ದ ವೆಂಕ್ಟ ಮುಂದಿನ ವರ್ಷ ಪಕ್ಕದ ಸುಬ್ರಾಯ ಹೆಗ್ಡೆರ ಮನೆಯಲ್ಲಿರುತ್ತಾನೆ.  

ನಮ್ಮ ಮನೆಯಲ್ಲಿ ತುಂಬಾ ವರ್ಷಗಳಿಂದಲೂ ಇದ್ದ ರಾಮ ಒಂದು ದಿನವೂ ಕೆಲಸ ತಪ್ಪಿಸಿದ್ದಿಲ್ಲ. ಬೆಳಿಗ್ಗೆ ಬಂದರೆ ತಿಂಡಿ ನಂತರ ಹನ್ನೊಂದರ ಚಾ ಮತ್ತೆ ಮೂರು ಘಂಟೆಗೆ ಊಟ ಮುಗಿಸಿಯೇ ಮನೆಗೆ ಹೋಗುತ್ತಿದ್ದವ. ಅವನ ಹೆಂಡ್ತಿ ಸಾವಿತ್ರಿಯೂ ಮನೆಗೆ ಕೆಲಸಕ್ಕೆ ಬರುವವಳೆ. ಅಜ್ಜಿಯ ಸಣ್ಣ ಪುಟ್ಟ ಕೆಲಸ ಮಾಡಿ ಕವಳ ಹಾಕಿ ಅಜ್ಜಿಗೆ ಊರ ಸುದ್ದಿ ತಿಳಿಸಿ ಮಕ್ಕಳಿಗೆ ಸ್ವಲ್ಪ ತಿಂಡಿ ಬಾಳೆ ಎಲೆಯಲ್ಲಿ ಗಂಟು ಕಟ್ಟಿ ಹೋಗುವುದು ಅವಳ ಪರಿಪಾಠ. ಸುರಸುಂದರಿಯಲ್ಲದಿದ್ದರೂ ಒಂಥರಾ ಆಕರ್ಷಣೆ ಅವಳ ಮುಖದಲ್ಲಿ. 

ಇಂತಹ ಸುಖಿ ಸಂಸಾರಕ್ಕೆ ತಾಪಾತ್ರಯ ಶುರುವಾದದ್ದು ಈ ಗ್ರಾಮೀಣ ರೋಜ್ಗಾರ್ ಯೋಜನೆ ಬಂದಮೇಲೆ. ದುಡ್ಡು ಹೊಡೆಯಲು ಕಂಟ್ರಾಕ್ಟರ್ ಇಲ್ಲದ ರಸ್ತೆ ಗುಂಡಿ ಮುಚ್ಚಿಸಿದೆ ಎಂತಲೋ ಅಥವಾ ರಸ್ತೆ ಬದಿ ಚರಂಡಿ ರಿಪೇರಿ ಎಂದು ಎರಡು ದಿನ ಕೆಲಸ ಮಾಡಿಸಿ ದೊಡ್ಡ ಮಟ್ಟದ ಬಿಲ್ ಪೀಕುವುದು ಎಲ್ಲರಿಗೂ ಗೊತ್ತಿದ್ದ ವಿಚಾರವೇ. ಅದಕ್ಕೆ ಎಂದು ದೂರದೂರಿನಿಂದ ಕರೆತಂದ ಆಳುಗಳಲ್ಲಿ ಭದ್ರನೂ ಒಬ್ಬ. ಗಟ್ಟಿಮುಟ್ಟಾಗಿ ಎರಡು ಗಂಡಾಳುಗಳ ಕೆಲಸ ಅವನೇ ಮಾಡುತ್ತಾ ಹೆನ್ಮಕ್ಕಳೊಂದಿಗೆ ನಗೆ ಚಟಾಕಿ ಹಾರಿಸುತ್ತಾ ಚುರುಕಾಗಿ ಒಡಾಡಿಕೊಂಡಿದ್ದವನು ಬೇಗನೆ ಸುಮಾರು ಗಂಡಸರ ಈರ್ಷೆಗೂ ಕಾರಣನಾದ. ಎಲ್ಲರಂತೆ ಎಲೆ ಅಡಿಕೆ ಹಾಕದ ಸಂಜೆ ಸಾರಾಯಿ ಪ್ಯಾಕೆಟ್ ಇಳಿಸದ ಅವನು ತಮ್ಮಂತಲ್ಲ ಎಂದು ತಿಳಿದು ಎಲ್ಲರೂ ದೂರವೇ ಉಳಿದಿದ್ದರು. ತಾನು ಘಟ್ಟದ ಕೆಳಗಿನವನು ಅಲ್ಲಿ ಮನೆ ಗದ್ದೆ ಇದೆ ಎಂಬ ಅವನ ಮಾತನ್ನು ಸುಮಾರು ಜನ ನಂಬಲು ಅವನ ಕುಂದಾಪುರ ಭಾಷೆ ಹಾಗು ಮೃದು ಸ್ವಭಾವವೂ ಕಾರಣ. 

ಹೀಗಿರುವ ಭದ್ರನ ಹಿಂದೆ ನಮ್ಮ ಸಾವಿತ್ರಿ ಬಿದ್ದಳೆಂದು ನೀವೀಗ ಸರಿಯಾಗೇ ಊಹಿಸಿದಿರಿ. ಗಂಡನನ್ನು ಬಿಟ್ಟು ಬೇರಾರನ್ನೂ ಕಣ್ಣೆತ್ತಿಯೂ ನೋಡದ ಎರಡು ಗಂಡುಮಕ್ಕಳ ತಾಯಿ ಸಾವಿತ್ರಿ ಅದು ಹೇಗೆ ಭದ್ರನ ಗಾಳಕ್ಕೆ ಬಿದ್ದಳೊ ಅಥವಾ ಊರ ಮಂದಿ ಹೇಳುವಂತೆ ಅವಳೆ ಅವನನ್ನು ಬುಟ್ಟಿಗೆ ಹಾಕಿಕೊಂಡಳೋ ಯಾರಿಗೂ ತಿಳಿಯದು. ಆದರೆ ಸ್ವಲ್ಪ ದಿನದಲ್ಲೆ ಸಾವಿತ್ರಿಯ ದಿನಚರಿಯೇ ಬದಲಾಗಿ ಹೋಯಿತು. ಎಂದೂ ಕೆಲಸಕ್ಕೆ ತಪ್ಪಿಸದಿದ್ದವಳು ವಾರಕ್ಕೆ ಮೂರು ಬಾರಿ ಚಕ್ಕರ್ ಹಾಕುವುದು ಖಾಯಮ್ಮಾಯಿತು. ಮಾವನ ಹತ್ತಿರ ವಾರದ ಸಂಬಳ ಕಡ ಕೇಳುವುದು ಮತ್ತೆ ಮೂರು ದಿನ ಮನೆಗೂ ಹೋಗದೆ ನಾಪತ್ತೆಯಾಗುವುದು. ಭದ್ರನ ಜೊತೆ ಸಾಗರ ಪ್ಯಾಟೆಲಿ ಕಂಡೆ ಎಂತಲೋ ಅಥವ ಅವರಿಬ್ಬರನ್ನೂ ವೀರಭಧ್ರ ಥೇಟರಿನ ಕತ್ತಲಲ್ಲಿ ಕೈ ಕೈ ಹಿಡಿದು ಕೂತಿದ್ದು ಹೌದೇ ಸೈ ಎಂದೋ ಗಾಳಿಸುದ್ದಿ ಕೇಳುವುದು ಮಾವನಿಗೆ ತಲೆನೋವಾಯಿತು.

ಇದೆಲ್ಲದರ ಪರಿಣಾಮ ಆಗಿದ್ದು ರಾಮನ ಮೇಲೆ. ಸಾತ್ವಿಕ ಸ್ವಾಭಾವದವ, ಹೆಂಡ್ತಿ ಮಕ್ಕಳ ಮೇಲೆ ಎಂದೂ ಕೈ ಮಾಡದ ರಾಮ ಸಾವಿತ್ರಿಯ ಹತ್ತಿರ ಗಟ್ಟಿಯಾಗಿ ಕೇಳಲೂ ಆಗದೆ ಆಕೆಯ ಈ ಮೋಸವನ್ನು ತಡೆದುಕೊಳ್ಳಲೂ ಆಗದೆ ಒಳಗೊಳಗೇ ಕೊರಗತೊಡಗಿದ. ಯಾರ ಬಳಿಯೂ ಹೇಳಿಕೊಳ್ಳಲ್ಲಾರದ ನೋವು. ಹೆಂಡತಿಯನ್ನು ಹದ್ದುಬಸ್ತಿನಲ್ಲಿಡಲಾರದ ಗಂಡಸೆಂಬ ಮಾತು ಕೇಳಿ ಕುಗ್ಗಿ ಹೋದ. ಮೈಮುರಿದು ದುಡಿದು ರಟ್ಟೆ ಹುರಿಗೊಳಿಸಿದ್ದ ರಾಮನ ಕೈಗಳಲ್ಲೀಗ ಬಲವೇ ಇಲ್ಲ. ಕೆಲ್ಸದಲ್ಲೂ ಅನ್ಯಮನಸ್ಕ.

ಚಳಿಗಾಲ ಹತ್ತಿರ ಬಂದತೆ ಅಡಿಕೆ ಬೆಳೆಗಾರರಿಗೆ ಎಲ್ಲಿಲ್ಲದ ಹುರುಪು. ವರ್ಷವಿಡಿ ದುಡಿದ ಬೆಳೆ ಕೈಗೆ ಬರುವ ಕಾಲ ಅರ್ಥಾತ್ ಕೊಯ್ಲು. ವರ್ಷಗಳಿಂದ ರಾಮನ ಸಹಾಯದಿಂದ ನಿರಾಯಾಸವಾಗಿ ಸಾಗುತ್ತಿದ್ದ ಕೆಲಸ ಯಾಕೋ ಈ ವರ್ಷ ಕಿರಿಕಿರಿಯಾಗುವಂತೆ ಕಾಣುತ್ತಿತ್ತು. 
ಇತ್ತ ಸಾವಿತ್ರಿಯ ಚಾಳಿಯ ಕಥೆ ಕೇಳಿದ್ದ ಅಜ್ಜಿಯೂ ಒಂದೆರಡು ಬಾರಿ ರಾಮನ ಬಳಿ ವಿಚಾರಿಸಿದ್ದಾಗಿತ್ತು. ಯಾರ ಬಳಿಯೂ ತುಟಿ ಅಲುಗಾಡಿಸದ ರಾಮ ಅಜ್ಜಿಯ ಬಳಿ ಅತ್ತುಕೊಂಡದ್ದು ನಾನೇ ಕಂಡಿದ್ದೆ. ಆದರೆ ಕ್ರಮೇಣ ಸಾವಿತ್ರಿಯ ವರ್ತನೆ ಇನ್ನು ಹದಗೆಟ್ಟಿತೇ ವಿನಾ ಸುಧಾರಣೆಯಂತೂ ಕಾಣಲಿಲ್ಲ. ಭದ್ರನನ್ನು ಮದುವೆಯಾಗಿದ್ದಾಳೆ ಬೇರೆ ಮನೆ ಮಾಡಿದ್ದಾಳೆ ಎಂಬ ಗಾಳಿಸುದ್ದಿಗಳು ನಮ್ಮನ್ನು ಮುಟ್ಟುತ್ತಲೇ ಇದ್ದವು. ರಾಮನಿಲ್ಲದೇ ಕೊಯ್ಲು ಮುಗಿಸಿದ ಮಾವ ಅವನ ಮೇಲೆ ಸಿಟ್ಟಾಗಲೂ ಆಗದೆ ಒಂದೆರಡು ಬಾರಿ ಸಾವಿತ್ರಿಯನ್ನೇ ಕರೆಸಿ ತಿಳಿಹೇಳಲು ಪ್ರಯತ್ನಿಸಿದ್ದರು. ಆದರೆ ಯಾವುದಕ್ಕೂ ಬಗ್ಗುವಂತೆ ಆಕೆ ಕಾಣಲಿಲ್ಲ. ಊರ ತುಂಬಾ ರಂಗುರಂಗಾದ ಕಥೆಗಳೆ- ಭದ್ರ ಸಾವಿತ್ರಿಯ ಬಗ್ಗೆ. 
ಇದೆಲ್ಲದರ ಮಧ್ಯೆ ನೋವುಂಡವನು ರಾಮ ಮತ್ತವನ ಇಬ್ಬರು ಮಕ್ಕಳು. ದಿನಕಳೆದಂತೆ ಮನೆ ಹೊರಗೂ ಕಾಲಿಡದ ರಾಮ, ಜನರ ಬಾಯಲ್ಲಿ ಗೇಲಿಯ ವಸ್ತುವಾದ. ಸಾವಿತ್ರಿ ಯಾವುದಕ್ಕೂ ಕ್ಯಾರೆ ಅನ್ನದೆ ತನ್ನ ಚಾಳಿ ಮುಂದುವರೆಸಿದ್ದಳು. 

ಒಮ್ಮೆ ಇದ್ದಕ್ಕಿದ್ದಂತೆ ಸಾವಿತ್ರಿ ಊರಿಂದ ಕಾಣೆಯಾದಳು. ಭದ್ರನ ಜೊತೆಗೆ. ಅಲ್ಲಿಗೆ ಒಂದು ಅಧ್ಯಾಯ ಮುಗಿಯಿತು. ಜನರ ಬಾಯಿಂದ ಮಾತುಗಳು ಜೊತೆ ಜೊತೆಗೇ ರಾಮನ ಜೀವನವೂ ಕೂಡ. ತಿಂದುಣ್ಣದ ರಾಮ ಕೆಲಸಕ್ಕೂ ಹೋಗದೆ ಮಕ್ಕಳನ್ನೂ ಕೇಳದೇ ಕೊರಗಿ ಮಾನಸಿಕವಾಗಿ ರೋಗಿಯಾದ. ತಲೆ ಕೆಟ್ಟೇ ಹೋಗಿದೆ ಎಂದು ಕೆಲವರೂ ಸ್ವಲ್ಪ ದಿನದಲ್ಲೆ ಸಾಯುವುದು ಗ್ಯಾರಂಟಿ ಎಂದು ಇನ್ನು ಕೆಲವರೂ ಮಾತಾಡುವುದು ಮಾವನ ಕಿವಿಗೂ ಬಿತ್ತು. ಯಾರೂ ದಿಕ್ಕಿಲ್ಲದ ಅವನ ಮಕ್ಕಳನ್ನು ಅಜ್ಜಿ ಕರೆಸಿ ಊಟ ಹಾಕುತ್ತಿದ್ದರು. ಕಲಿಯುವುದರಲ್ಲಿ ಜೋರಿದ್ದ ಮಕ್ಕಳಿಬ್ಬರೂ ಮಾವನ ಬಳಿ ಪಾಠ ಹೇಳಿಸಿಕೊಳ್ಳಲೂ ಬರತೊಡಗಿದ್ದರು. 


ಅಷ್ಟರಲ್ಲಿ ಮುಂಬೈಯಿಂದ್ದ ಮರಳಿದ್ದ ಯಾರೋ ಅಲ್ಲಿ ರೆಡ್ ಲೈಟ್ ಸ್ಟ್ರೀಟ್ನಲ್ಲಿ ಸಾವಿತ್ರಿಯನ್ನು ಕಂಡನಂತೆ. ಅವಳ ಜೊತೆ ಊರು ಬಿಟ್ಟಿದ್ದ ಭದ್ರ ಅವಳನ್ನು ಮುಂಬೈನಲ್ಲಿ ೫ ಸಾವಿರಕ್ಕೆ ಮಾರಿದ್ದಾನಂತೆ ಎಂಬ ವರ್ತಮಾನಗಳು ಕೇಳಿಬಂದವು. ಸುಖಸಂಸಾರಿಯಗಿದ್ದ ಸಾವಿತ್ರಿ ಮುಂಬೈಯ ಕೋಠಿಯಲ್ಲಿ ಖೈದಿಯಾದ ಕಥೆ ನಿಧಾನವಾಗಿ ಜನರ ಮನಸ್ಸಿನಿಂದ ಮರೆಯಾಗತೊಡಗಿತ್ತು. ಹೈಸ್ಕೂಲ್ ಓದಿದ ಮಕ್ಕಳಿಬ್ಬರೂ ಎಲ್ಲೋ ಕೆಲಸ ಹಿಡಿದು ತಮ್ಮ ಜೀವನ ಕಂಡುಕೊಂಡಿದ್ದರು. ರಾಮ ಹುಚ್ಚನಂತೆ ಬೀದಿ ಸುತ್ತುತ್ತಿದ್ದ.
ಇಷ್ಟೇ ಆಗಿದ್ದಿದ್ದರೆ ಇದು ಎಷ್ಟೋ ಸಾವಿರ ಕಥೆಗಳಂತೆ ಇತಿಹಾಸದ ಪುಟಗಳಲ್ಲಿ ಕರಗಿ ಹೋಗುತ್ತಿತ್ತು. ಆದರೆ ಕಥೆಗೆ ತಿರುವಿನಂತೆ ರಾಮನ ಜೀವನದಲ್ಲೂ ತಿರುವು ಬರುವುದರಲ್ಲಿತ್ತು. 

ಐದಾರು ವರ್ಷಗಳುರುವುಷ್ಟರಲ್ಲಿ ಮೂಳೆ ಚಕ್ಕಳವಾದ ಗುಟುಕು ಜೀವ ಹಿಡಿದಿಟ್ಟುಕೊಂಡಿದ್ದ, ಹಳೆಯ ಗೆಲುವಾದ ಸಾವಿತ್ರಿಯ ಪಳೆಯುಳಿಕೆಯಂತ್ತಿದ್ದ ಒಂದು ಜೀವ ನಮ್ಮೂರಿಗೆ ಬಂದಿಳಿಯಿತು. ಅವಳ ಮುಂಬೈ ಕಥೆ ನಿಜವೋ ಸುಳ್ಳೋ ಕೇಳುವುದಕ್ಕೆ ಅವಕಾಶ ಕೊಡದಂತೆ ಆಕೆ ಸೀದಾ ರಾಮನ ಮನೆ ಸೇರಿದ್ದಳು. ಹುಚ್ಚನಂತಾಗಿದ್ದ ರಾಮ ಸಾವಿತ್ರಿಯ ಬರುವಿಕೆಯಿಂದಲೇ ಮರಳಿ ಸರಿಯಾದದ್ದು ಎಂದು ಎಲ್ಲ ಹೇಳುತ್ತಿರುವಂತೆಯೇ ಸಾವಿತ್ರಿ ಗತಿಸಿದ್ದಳು. 


ವರ್ಷಗಳಿಂದ ನಾಪತ್ತೆಯಾಗಿದ್ದ ರಾಮ ಇದ್ದಕ್ಕಿದ್ದಂತೆ ಒಂದಿನ ಕೆಲಸಕ್ಕೆ ಹಾಜರಾದ. ಏನೂ ಆಗಿಯೆ ಇಲ್ಲವೆಂಬತೆ. ಅವನ ಕಣ್ಣುಗಳಲ್ಲಿ ಮತ್ತೆ ಹೊಳಪಿತ್ತು. ಮೈಯಲ್ಲಿ ಕಸುವಿತ್ತು. ಸಾವಿತ್ರಿ ತಾನು ಮಾಡಿದ್ದನ್ನು ಸರಿಮಾಡಲೇ ಊರಿಗೆ ಬಂದಂತೆ, ತನ್ನ ಜೀವವನ್ನೆಲ್ಲಾ ರಾಮನಿಗೆ ಎರೆದಂತೆ. ಅದೆಲ್ಲದುರ ಬಗ್ಗೆ ಎಂದೂ ಬಾಯೇ ತೆರೆಯದ ರಾಮ ಊರವರಗೆ ಅಚ್ಚರಿಯ ವಸ್ತುವಾಗೇ ಉಳಿದ. ಆದರೆ ಒಮ್ಮೊಮ್ಮೆ ಅಜ್ಜಿಯನ್ನು ಕಂಡಾಗ ಮಾತ್ರ ಹೊಮ್ಮುತ್ತಿದ್ದ ಅವನ ಮುಗುಳ್ನಗೆ ನನಗೆ ಮಾತ್ರ ಯವುದೋ ಒಗಟಿನ ಸುಳಿಹಿನಂತೆ ಕಾಣುತ್ತಿತ್ತು. 

Comments

  1. Abba! ri neevu kadambari baribeku ri!! idhu blogeElla nimigalla!!

    ReplyDelete

Post a Comment

Popular posts from this blog

ಫೋನ್ ಪುರಾಣ

ಸಾಕಮ್ಮ

ಅಜ್ಜಿಯ ನೆನಪು!