ನನ್ನದಲ್ಲದ ಊರು ಮತ್ತದರ ಪ್ರಶ್ನೆಗಳು
ಯಾಕೋ ಬೇಸರ. ಮತ್ತದೇ ಬೇಸರ ಮತ್ತದೇ ಏಕಾಂತ ಹಾಡಿನಂತಲ್ಲ, ಎಲ್ಲ ಇದ್ದೂ ಕಾಡುವ ಬೇಸರ. ಇದೆಲ್ಲಾ ಮಾಡುತ್ತಿರುವುದು ಯಾಕೆ ಎಂಬ ಪ್ರಶ್ನೆ.
ಇವತ್ತು ಆಫಿಸಿನಿಂದ ಬರ್ತಾ ನನ್ನ ಅಪಾರ್ಟ್ಮೆಂಟಿನ ಬದಲು ಯಾವುದೋ ಮನೆ ಎದುರಿಗೆ ನಿಂತು ಕೀ ಹುಡುಕಾಟ. ತಕ್ಷಣ ಆದ realisation 'ಓ ಇದು ನಮ್ಮನೆಯಲ್ಲ' ಹಾಗಾದರೆ ಯಾವುದು ನಮ್ಮನೆ? ವರ್ಷಗಳ ಮೊದಲೇ ಬಿಟ್ಟು ಬಂದ, ಅಪ್ಪ ಅಮ್ಮ ಸಾಲ ಮಾಡಿ ಜತನದಿಂದ ಕಟ್ಟಿದ, ಈಗ ಬಣಗುಡುತ್ತಿರುವ ಮಲೆನಾಡಿನ ಗೂಡೇ, ವರ್ಷಕ್ಕೆರಡು ಬಾರಿ ಹೋಗಿ ನದಿ-ತೋಟ
-ನಾಯಿ ಎಂದು ಎದೆಯುಬ್ಬಿಸಿ ಓಡಾಡಿ ನಂತರ ಬೆಂಗಳೂರಿಗೆ ಬರುತ್ತಿದ್ದಂತೆ ಮರೆವ ಊರಿನ ತೋಟದ ಮನೆಯೇ, ವಿದ್ಯೆಯ ಜೊತೆಗೆ ಗೆಳೆತಿಯರನ್ನೂ ಕೊಟ್ಟು ಪೊರೆದ ಹಾಸ್ಟೆಲ್ಗಳೆ ಅಥವಾ guestನ್ನು ಹೆಸರಿನಲ್ಲಿ ಮಾತ್ರ ಉಳಿಸಿಕೊಂಡಿರುವ ಕಿಶ್ಕಿಂಧೆಗಳಂತಿರುವ ಪೀಜಿಗಳೇ? ಪ್ರಶ್ನೆಗಳ ಮೇಲೆ ಪ್ರಶ್ನೆ, ಉತ್ತರ ನಾಸ್ತಿ.
ಇದು ಮನುಷ್ಯನ limitationನೇ ಇರಬೇಕು. ಚಿಂತೆ ಇಲ್ಲದ್ದಿದ್ದಾಗಲೂ ಚಿಂತೆ ಇಲ್ಲವಲ್ಲ ಅನ್ನುವುದೇ ಚಿಂತೆ.
ನಾವು ಅಲ್ಲಿಯೂ ಸಲ್ಲದವರು ಇಲ್ಲಿಯೂ ಓಗ್ಗಿಕೊಳ್ಳದವರು. ಗುಜ್ಜೆ ಹುಳಿ ಮಾವಿನ ತಂಬುಳಿ ಪಟ್ಟಾಗಿ ಹೊಡೆದು ಕವಳ ಹಾಕಿ 'ಹೋಯ್ ಊರ್ ಬದಿ ಮತ್ತೆಂತು ಸಮಾಚಾರ' ಎನ್ನುವುದು ತೀರಾ time waste ಎನ್ನಿಸಿದರೂ ಇತ್ತ MG, Brigade ರೋಡಿನ ಸಿಗರೇಟಿನ ಮೋಡ ಸ್ರುಷ್ಟಿಸುವ Whats up dude ಎಂದು ಮುತ್ತಿಡುವ ಹುಡುಗಿಯರೂ ನಮಗೆ ದೂರವೇ.
ಊರ ಜಾತ್ರೆಯಲ್ಲಿ ದೊಂಬರಾಟದ ಹುಡುಗಿ ಹಗ್ಗದ ಮೇಲೆ balance ಮಾಡುತ್ತಿದುದು ನೆನಪಾಗಿ ನನ್ನದು ಈಗ ಅದೇ ತರದ ಜೀವನ ಎಂದು ಒಮ್ಮೊಮ್ಮೆ ಅನ್ನಿಸಿದ್ದಿದೆ.
ನಮ್ಮ ಅಳತೆಯಲ್ಲದ ಚಪ್ಪಲಿ ಮೆಟ್ಟಿ ಹೇಳಲಾಗದ ಆದರೆ ತಾಳಲಾಗದ ನೋವು ಅನುಭವಿಸಿದಂತೆ ಬದುಕು. ನಮ್ಮದಲ್ಲದ ಮುಖವಾಡಗಳು, ಕೊನೆಗೆ ಆಟ ಮುಗಿದಾಗ ನಿಜ ಮುಖವೂ ಕಳಚಿ ಬಂದು ಬರೀ ಮಾಂಸ ಮುದ್ದೆಗಳಾಗಿ ಅರೇ ಇದ್ಯಾರಿದು ಅನ್ನುವಂತಹ ತಳಮಳ.
ನಗರಗಳು ಆಪ್ತವಾಗುವುದು ಬಹುಶ ಚಲನಚಿತ್ರಗಳಲ್ಲಿ ಮಾತ್ರ. ಯಾರೂ ಇಲ್ಲದಾಗ ಬೇರೆವರನ್ನು ಪೊರೆದು ಬಾಚಿ ತಬ್ಬಿದ ನಗರ ನನಗೇಕೆ ಎಂದೂ ಆಪ್ತವಾಗಿಲ್ಲವೋ ಇನ್ನೂ ನಿಗೂಢವೇ.
ಅಂದು ರೈಲು ಇಳಿಯುತ್ತಿದ್ದಂತೆ ಬೆರಗು ಹುಟ್ಟಿಸುತ್ತಿದ್ದ ಊರು, ಇಂದು ಬರೀ ನಿಟ್ಟುಸಿರಿಡುವಂತೆ ಮಾಡುತ್ತದೆ. ಎಲ್ಲರೂ ಓಡುವಾಗ ನಮಗೆ ಅವಸರವಿಲ್ಲದ್ದಿದ್ದರೂ ಓಡುವಂತೆ ಮಾಡಿ ಇನ್ನಿಲ್ಲದ ಧಾವಂತ ಹುಟ್ಟುಹಾಕುತ್ತದೆ. ರೂಮಿಗೆ ಬಂದರೇ ಮತ್ತದೇ ಏಕಾಂತ ನನ್ನದಲ್ಲದ, ಹತ್ತಿರದಿಂದ ನೋಡಿದರೆ ಯಾರಿಗೂ ಆದಂತೆ ಕಾಣದ ಈ ಊರು ನನಗಷ್ಟೆ ಅಪರಿಚಿತವೋ ಅಥವಾ ನಿಮಗೂ ಹೌದೋ?
Super!!
ReplyDelete