ಸಾಕಮ್ಮ
"ಯಾಕೊ ನನ್ನ ಹಣೆಬರಾನೇ ಸರಿ ಇಲ್ಲ" ಅಂದ್ಕೊಂಡು ಒಂದು ಲೋಟ ತಣ್ಣನೆ ನೀರು ಕುಡಿದು ಸೋಫ಼ಾಗೊರಗಿದಳು ಸಾಕಮ್ಮ ಅಲಿಯಾಸ್ ಸಾನ್ವಿ. ಒಂದು ಹಳೇ ಕಾಲದ ಹೆಸರು ಇನ್ನೊಂದು ಫ಼ುಲ್ ಮಾಡರ್ನ್ ಹೆಸರು, ಯಾವುದೋ ಕೂರ್ಗಿ ಕಥೆ ಅಂತ ನೀವಂದುಕೊಂಡ್ರೆ ಅದು ತಪ್ಪು. ನಮ್ಮ ಕಥಾನಾಯಕಿ ಸಾಕಮ್ಮ ದಾವಣಗೆರೆಯವಳು. ಮೂರು ಜನ ಅಕ್ಕಂದಿರ ಹಿಂದೆ ಕೊನೆಗೆ ನಾಲ್ಕನೆಯದೂ ಹೆಣ್ಣೇ ಆದಾಗ ಅವರ ಅಮ್ಮ ಇನ್ನು ಹೆಣ್ಣು ಸಾಕು ಅಂತ ದೇವ್ರಿಗೆ ಹರಕೆ ಹೊತ್ಕೊಂಡು, ಇವ್ಳಿಗೆ ಸಾಕಮ್ಮ ಅಂತ ಹೆಸರಿಟ್ಟರಂತೆ. ಎಲ್ಲಾರ ತರ ಇವ್ಳಿಗೂ ಒಂದು ಹೆಸರು. What's in a name? ಅಂತ ಶೇಕ್ಸ್ ಪಿಯರ್ ಹೇಳಿದನೋ ಬಿಟ್ಟನೋ ಆದ್ರೆ ಬೆಳಿತಾ ಬೆಳಿತಾ ಸಾಕಮ್ಮನಿಗೆ ತನ್ನ ಇಡೀ ಬದುಕೇ ತನ್ನ ಹೆಸರಲ್ಲಿದೆ, ಇದಿರೋ ತನಕ ತನ್ನ ಜೀವನ ಸುಧಾರಿಸೊಲ್ಲ ಅನ್ಸೊಕ್ಕೆ ಶುರು ಆಯ್ತು. ಅಕ್ಕಿ ಮಂಡಿಲೀ ಗುಮಾಸ್ತನಾಗಿದ್ದ ಅಪ್ಪನಿಗೆ ಬರ್ತಿದ್ದ ಸಂಬಳ ಮನೇಲಿದ್ದ ಜನರ ಹೊಟ್ಟೆ-ಬಟ್ಟೆಗೂ ಸಾಲ್ತಿರಲಿಲ್ಲ. ಅವರ ಅಮ್ಮ ಹೋಳಿಗೆ-ಹಪ್ಪಳ ಏನೇನೋ ಮಾಡಿ ಸ್ವಲ್ಪ ದುಡ್ಡು ಸಂಪಾದಿಸಿದರೂ ನಾಲ್ಕು ಜನ ಹೆಣ್ಣುಮಕ್ಕಳನ್ನ ನೋಡ್ಕೊಳ್ಳೊಕ್ಕಾಗದೆ ಸಾಕಮ್ಮ ಶಿವಮೊಗ್ಗೆಯಲ್ಲಿದ್ದ ತನ್ನ ದೊಡ್ಡಮ್ಮನ ಮನೆಗೆ ರವಾನೆಯಾದ್ಲು. ದೊಡ್ಡಮ್ಮನ ಮನೇಲೇನು ರಾಜವೈಭೋಗ ಇಲ್ಲದೇ ಇದ್ರೂ, ಸಣ್ಣಾ ಕಿರಾಣಿ ಅಂಗಡಿ ಇಟ್ಟಿದ್ದ ದೊಡ್ಡಪ್ಪನ ವ್ಯಾಪಾರ ತಕ್ಕಮಟ್ಟಿಗೆ ನಡೀತಿತ್ತು. ಒಬ್ಬನೇ ಗಂಡು ಮಗ ಇದ್ದ ದೊಡ್ಡಮ್ಮ ಸಾಕಮ್ಮನನ್ನು ಚ...