ಮನಸ್ಸೆಂಬ ಗುಜರಿ ಅಂಗಡಿ
ಮೊನ್ನೆ ಯುಗಾದಿಗೆಂದು ಮನೆಯೆಲ್ಲಾ ಕ್ಲೀನ್ ಮಾಡುವಾಗ ಸಿಕ್ಕ ಹಳೆಯ ಗ್ರೀಟಿಂಗ್ ಕಾರ್ಡ್ ಮದುವೆಗೆ ಮೊದಲಿನ ದಿನಗಳನ್ನು ನೆನಪಿಸಿತ್ತು. ಪ್ರಶಾಂತನಿಗೆಂದೇ ನಾನೇ ಕೂತು ಕೈಯಾರೆ ಮಾಡಿದ್ದ, ಪ್ರೀತಿ ತೋರಿದ ದಿನಗಳು. ಅಪರೂಪಕ್ಕೊಮ್ಮೆ ಎಲ್ಲೆಲ್ಲಿಂದಲೋ ಸಿಕ್ಕಿಬಿಡುವ ಈ ವಸ್ತುಗಳೇ ಹೀಗೆ. ವಾಸ್ತವದಿಂದ ಗತಕಾಲಕ್ಕೆ ಸಣ್ಣ ಪಯಣ ಮಾಡಿಸುತ್ತವೆ. ನೆನಪಿನ ನವಿಲುಗರಿ ಬಿಚ್ಚಿ ಮನಸ್ಸು ಸಂತೋಷದ ಮಳೆಗೆ ತೋಯ್ದು ತೊಪ್ಪೆಯಾಗುತ್ತದೆ, ದುಃಖಕ್ಕೆ ಕಣ್ಣಾಲಿಗಳನ್ನು ತುಂಬಿಸುತ್ತವೆ. ಎಡಬಿಡದೆ ಪುಸ್ತಕ ಓದುವ ಹುಚ್ಚಿದ್ದ ನನಗೆ ಅಜ್ಜನಮನೆಗೆ ಹೋದಾಗಲೆಲ್ಲ ಅಟ್ಟದ ಮೇಲಿದ್ದ ಹಳೆಯ ಪುಸ್ತಕ ಸಂಗ್ರಹ ಒಂದು ಸಣ್ಣ ನಿಧಿಯಂತೇ ಕಾಣುತ್ತಿತ್ತು. ಯಂಡಮೂರಿ ವೀರೇಂದ್ರನಾಥರ ಅನುದೀಪ, ಪರಮಹಂಸ ಯೋಗಾನಂದರ ಪವಾಡ ಪ್ರಪಂಚ, ಕರ್ವಾಲೋದ ಮಂದಣ್ಣ ಎಲ್ಲರ ಪರಿಚಯ ಆಗಿದ್ದು ಈ ಕ್ಲೀನಿಂಗ್ ಕೆಲಸಗಳಿಂದಲೇ! ಒಮ್ಮೆ ಹಾಗೆ ಅಟ್ಟದ ಮೇಲೆ ಏನೋ ಹುಡುಕಲು ಹೋಗಿ ಮಾವ ಸುಮಾರು 20 ವರ್ಷದ ಹಿಂದೆ ಅತ್ತೆಗೆ ಬರೆದ ಪ್ರೇಮ ಪತ್ರಗಳ ಗಂಟು ಸಿಕ್ಕಿ ಓದಲೋ ಬೇಡವೋ ಎಂಬ ಜಿಜ್ಞಾಸೆಯ ನಡುವೆ ಒಂದೇ ಓದಿದರಾಯಿತು ಎಂದು ಓದಿದ ಪೂರ್ತಿ ಕಟ್ಟು ಇನ್ನು ಎಲ್ಲೋ ನನ್ನ ನೆನಪಿನಲ್ಲಿ ಬೆಚ್ಚಗೆ ಕೂತಿದೆ. 'ನಿಮ್ ರೂಮ್ ನೋಡಕ್ಕಾಗಲ್ಲ ಏನೇನೋ ತುಂಬ್ಕೊಂಡಿದೆ. ಕ್ಲೀನ್ ಮಾಡಕ್ಕೂ ಟೈಮ್ ಆಗ್ತಿಲ್ಲ' ಅಂತ ಅಮ್ಮ ನಾನು ಅಕ್ಕ ಇಬ್ಬರು ಮನೆ ಬಿಟ್ಟ ಮೇಲೆ ತುಂಬಾ ಕಾಲ ಹೇಳುತ್ತಲೇ ಇದ್ದಳು. ಕೊನ